ಭಟ್ಕಳ: ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಮುರ್ಡೇಶ್ವರದ ಉದ್ಯಮಿ ಶ್ರೀಧರ ನಾಯ್ಕ ನೀರು ಶುದ್ಧೀಕರಣ ಉಪಕರಣವನ್ನು ದಾನವಾಗಿ ನೀಡಿದ್ದಾರೆ.
ಕಾರ್ಯಕ್ರಮ ಉದ್ದೇಶಿಸಿ ಮಾತಮಾಡಿದ ಉದ್ಯಮಿ ಶ್ರೀಧರ ನಾಯ್ಕ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗ ಬರುತ್ತಿರುವುದರಿಂದ ನೀರಿನಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಿದೆ. ಇದರಿಂದ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರದಿರಲು ಈ ಸಣ್ಣ ಸೇವೆಯನ್ನು ನೀಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಕಡೆ ದೊಡ್ಡ ದೊಡ್ಡ ರಾಜಕಾರಿಣಿಗಳು ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ ಎಂದ ಅವರು ಕಳೆದ 20 ವರ್ಷದಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ನಾನು ನನ್ನ ಕ್ಷೇತ್ರದಲ್ಲಿ ಬಹಳಷ್ಟು ಮಹತ್ವ ಪೂರ್ವ ಬದಲಾವಣೆಯನ್ನು ಈಗಾಗಲೇ ತಂದಿದ್ದೇನೆ. ನನ್ನ ಕೈಲಾದ ಮಟ್ಟಿಗೆ ನನ್ನ ಕ್ಷೇತ್ರದಲ್ಲಿ ಸಹಾಯ ಸಹಕಾರವನ್ನು ನೀಡಿದ್ದೇನೆ. ಇಂದು ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ನನ್ನ ಸಣ್ಣದೊಂದು ಕಾಣಿಕೆಯನ್ನು ನೀಡಿದ್ದೇನೆ ಎಂದರು.
2023 ರ ವಿಧಾನ ಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಲು ರಾಷ್ಟ್ರೀಯ ಪಕ್ಷದಿಂದ ಅರ್ಜಿಯನ್ನು ಸಲ್ಲಿಸಿದ್ದೇನೆ. ನಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಹಲವು ಸಮಸ್ಯೆಗಳಿವೆ. ಅದನ್ನು ಈಗಾಗಲೇ ನಾನು ಪಟ್ಟಿ ಮಾಡಿಕೊಂಡಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಉದ್ಯಮಿ ಶ್ರೀಧರ ನಾಯ್ಕರನ್ನು ಶಾಲೆಯ ಎಸ್ ಡಿ ಎಮ್ ಸಿವತಿಯಿಂದ ಸನ್ಮಾನಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಮಕ್ಕಳ ಪಾಲಕರು ಮತ್ತು ಶಾಲೆಯ ಮುಖ್ಯ ಉಪಾಧ್ಯಾಯರು ಉಪಸ್ಥಿತರಿದ್ದರು.