ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಈಗ ಬಹುತೇಕ ಕಾಂಗ್ರೆಸ್ ಸರಳ ಬಹುಮತದತ್ತ ಹೆಜ್ಜೆ ಇಟ್ಟಿದೆ. ಬಿಜೆಪಿಯನ್ನು ಹಿಂದಿಕ್ಕಿ 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮತ ಎಣಿಕೆಯ ನಂತರ ಎಕ್ಸಿಟ್ ಪೋಲ್ಗಳ ಭವಿಷ್ಯ ತಲೆಕೆಳಗಾಗಿದ್ದು, ಕಾಂಗ್ರೆಸ್ ಸರಳ ಬಹುಮತದತ್ತ ಮುನ್ನುಗ್ಗುತ್ತಿದೆ. ಆದ್ರೆ, ಇದೀಗ ಗೆದ್ದ ಖುಷಿಯಲ್ಲಿರುವ ಕಾಂಗ್ರೆಸ್ಗೆ ಒಂದು ಕಡೆ ಆಪರೇಷನ್ ಕಮಲ ಭೀತಿ ಶುರುವಾಗಿದ್ರೆ, ಮತ್ತೊಂದೆಡೆ ಮುಖ್ಯಮಂತ್ರಿ ಪಟ್ಟ ಯಾರಿಗೆ ಕಟ್ಟಬೇಕು ಎನ್ನುವ ಗೊಂದಲಕ್ಕೆ ಕಾಂಗ್ರೆಸ್ ಸಿಲುಕಿದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವಿನತ್ತ ಮುನ್ನುಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜೈರಾಮ್ ಠಾಕೂರ್ ಹೇಳಿದ್ದಾರೆ. ಅಲ್ಲದೇ, ಜನಾದೇಶವನ್ನು ಗೌರವಿಸುತ್ತೇನೆ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ವರಿಷ್ಠರಿಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ರಾಜಕೀಯ ಬದಿಗೊತ್ತಿ ರಾಜ್ಯದ ಅಭಿವೃದ್ಧಿಗೆ ಬದ್ಧನಾಗಿರುವುದಾಗಿ ಅವರು ತಿಳಿಸಿದ್ದಾರೆ.