ಈಜುಕೊಳದಲ್ಲಿ ಕ್ಲೋರಿನ್ ಅನಿಲ ಸೋರಿಕೆ: 10 ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಆಂಧ್ರಪ್ರದೇಶ: ಪುರಸಭೆಯ ಈಜುಕೊಳದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ವಿಜಯವಾಡ ಜಿಲ್ಲೆಯಲ್ಲಿ ನಡೆದಿದೆ. ಅಸ್ವಸ್ಥರಾದವರೆಲ್ಲ 8-14 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಎಂದು ಈಜುಕೊಳ ಅಕಾಡೆಮಿ ಮೇಲ್ವಿಚಾರಕರು ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಮಕ್ಕಳು ಈಜುತ್ತಿರುವ ವೇಳೆ ಕ್ಲೋರಿನ್ ಸೋರಿಕೆಯಾಗಿ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳೆಯ ಉಪಕರಣಗಳು ಮತ್ತು ಹಳೆಯ ಗ್ಯಾಸ್ ಸಿಲಿಂಡರ್‌ನಿಂದಾಗಿ ಅನಿಲ ಸೋರಿಕೆಯಾಗಿ ಈ ಅವಘಡ ಸಂಭವಿಸಿದ್ದು, ನಂತರ ಅದನ್ನು ಸರಿಪಡಿಸಲಾಗಿದೆ. ಅಸ್ವಸ್ಥಗೊಂಡ 10 ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಹಾಗೂ ಗಂಭೀರ ಸ್ಥಿತಿಯಲ್ಲಿದ್ದ ಒಂದು ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ನಂತರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈಗ  ವಿದ್ಯಾರ್ಥಿಗಳ ಆರೋಗ್ಯ  ಸ್ಥಿರವಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.