ಕಾರವಾರ: ಆರ್ಮಿಯ ಉನ್ನತಾಧಿಕಾರಿ ಎಂದು ಹೇಳುತ್ತಾ ಓಡಾಡುತ್ತಿದ್ದ ಫೇಕ್ ಆರ್ಮಿ ಆಫೀಸರ್ ನನ್ನು ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ರ್ಯಾಂಕಿಂಗ್ ಯೂನಿಫಾರ್ಮ್ ಧರಿಸಿಕೊಂಡು ಓಡಾಡುತ್ತಿದ್ದ ಆರೋಪಿ ಕಾರವಾರ ಸಿದ್ಧರ ನಿವಾಸಿ
ವಿನಾಯಕ ಮಹಾಲೆ ಎಂಬಾತನೇ ಬಂಧಿತ ಆರೋಪಿ.
ಆರ್ಮಿಯಲ್ಲಿ ಕೆಲಸ ಕೊಡಿಸೋದಾಗಿ ಹಲವರಿಂದ ಹಣ ಪಡೆದು ಈತ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಈತ ಪ್ರತೀದಿನ ಬೈಕ್‌ನಲ್ಲೇ ಕಾರವಾರ, ಸೌತ್ ಗೋವಾ ಓಡಾಡುತ್ತಿದ್ದ. ಒಬ್ಬರಿಂದ 66,000 ರೂ, ಇನ್ನೊಬ್ಬರಿಂದ 35,000 ರೂ, ಸೇರಿದಂತೆ ಹಲವರಿಂದ ಹಣ ಪಡೆದು ವಿನಾಯಕ ಮಹಾಲೆ ಪಂಗನಾಮ ಹಾಕಿದ್ದಾನೆ ಎನ್ನಲಾಗಿದೆ.
ಕಡವಾಡ ಮಾರುತಿ ನಗರದ ಹೇಮಲತಾ ಎಂಬವರಿಂದಲೂ ಹಣ ಪಡೆದು ಮೋಸ ಮಾಡಿದ್ದ. ಇವರ ಪುತ್ರ ಪ್ರಸಾದ್ ಎಂಬಾತನಿಗೆ ನೇವಿಯಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ಹಣ ಪಡೆದಿದ್ದ. ಕಳೆದ ಒಂದೆರಡು ವಾರಗಳಿಂದ ಈತನ ಮೇಲೆ ನಿಗಾಯಿರಿಸಿದ್ದ ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಗ್ರೌಂಡ್ ವರ್ಕ್ ಮಾಡಿದಾಗಿ ಈತನ ಅಸಲೀಯತ್ತು ಬಯಲಾಗಿದೆ. ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ ಆರೋಪಿಯ ಬಂಧನವಾಗಿದೆ.
ಇನ್ನು ಆರೋಪಿಯ ಮನೆಯನ್ನು ಹುಡುಕಾಡಿದಾಗ 66,000 ರೂ ನಗದು ಹಣ ಲಭ್ಯವಾಗಿದೆ. ಆರೋಪಿ ಮಾಡಿರುವ ಮೋಸ ತಿಳಿದು ಸಂತ್ರಸ್ತೆ ಹೇಮಲತಾ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಹಿಂದೆ ಆರೋಪಿ ಬೆಳಗಾವಿ ಕಮಾಂಡೋ ಟ್ರೈನಿಂಗ್ ಸ್ಕೂಲ್‌ನಲ್ಲಿ ಚಿಕ್ಕಪುಟ್ಟ ಕೆಲಸಕ್ಕೆ ಸೇರಿಕೊಂಡಿದ್ದ. ಮರಾಠಾ ಲೈಟ್ ಇನ್‌ಫೆಂಟ್ರಿ ವಿಭಾಗದಡಿ ಹೆಲ್ಪಿಂಗ್ ಬಾಯ್ ಆಗಿ ಸ್ವೀಪಿಂಗ್ ಮುಂತಾದ ಕೆಲಸ ಮಾಡ್ತಿದ್ದ. ಅಲ್ಲೇ ಅಧಿಕಾರಿಗಳ ರ್ಯಾಂಕಿಂಗ್, ಅವರ ಯೂನಿಫಾರ್ಮ್‌ಗಳ ಬಗ್ಗೆ ಆರೋಪಿ ಮಾಹಿತಿ ಕಲೆ ಹಾಕಿದ್ದ. ಬಳಿಕ ಆ ಕೆಲಸ ಬಿಟ್ಟು 2015-16ರ ವೇಳೆ ಆರ್ಮಿ ಆಫಿಸರ್ ಯೂನಿಫಾರ್ಮ್ ಖರೀದಿಸಿದ್ದ. 2020ರಿಂದ ಅಧಿಕಾರಿಯ ಹೆಸರು ಹೇಳಿ ಅಡ್ಡಾಡ್ತಿದ್ದ. ಕಾರವಾರ ಹಾಗೂ ಗೋವಾ ಭಾಗದಲ್ಲಿ ಹಲವರಿಗೆ ಈತ ಮೋಸ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ.