ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 11 ಮಂದಿ ಸ್ಥಳದಲ್ಲೇ ಸಾವು: ಘಟನೆಗೆ ಪ್ರಧಾನಿ ಮೋದಿ ಸಂತಾಪ

ಮಧ್ಯಪ್ರದೇಶ: ಬಸ್‌ ಮತ್ತು ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿ 11 ಜನರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಬೇತುಲ್‌ನ ಜಲ್ಲಾರ್ ಪೊಲೀಸ್ ಠಾಣೆ ಬಳಿ ಸಂಭವಿಸಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದ್ದು 6 ಪುರುಷರು, 3 ಮಹಿಳೆಯರು, 5 ವರ್ಷದ ಬಾಲಕಿ ಮತ್ತು ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಕಾರ್ಮಿಕರಾಗಿದ್ದು ಅವರು ಮಹಾರಾಷ್ಟ್ರದ ಅಮರಾವತಿಯಿಂದ ತಮ್ಮೂರಿಗೆ ವಾಪಸಾಗುತ್ತಿದ್ದರು ಎಂದು ತಿಳಿದು ಬಂದಿದೆ. ಕಾರು ಚಾಲಕ ವಾಹನ ಚಲಾಯಿಸುತ್ತಿದ್ದ ವೇಳೆ ನಿದ್ರೆಗೆ ಜಾರಿದ್ದರಿಂದ ಅಪಘಾತ ಉಂಟಾಗಿದೆ ಎನ್ನಲಾಗಿದೆ. ಇನ್ನು ಭೀಕರ ಘಟನೆಯ ಬಳಿಕ 7 ಶವಗಳನ್ನು ತಕ್ಷಣವೇ ಹೊರತೆಗೆಯಲಾಗಿದೆ. ಉಳಿದ ದೇಹಗಳನ್ನು ಹೊರತೆಗೆಯಲು ನಜ್ಜುಗುಜ್ಜಾದ ವಾಹನದ ಭಾಗಗಳನ್ನು ಬೇರ್ಪಡಿಸಬೇಕಾಯಿತು ಎಂದು ಬೇತುಲ್ ಹಿರಿಯ ಪೊಲೀಸ್ ಅಧಿಕಾರಿ ಸಿಮಲಾ ಪ್ರಸಾದ್ ತಿಳಿಸಿದ್ದಾರೆ.

ಅಪಘಾತದಲ್ಲಿ ಪ್ರಯಾಣಿಕರ ಸಾವಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತೀವ್ರ ಕಂಬನಿ ಮಿಡಿದಿದ್ದು ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.