ಜಿಕೆವಿಕೆ ಆವರಣದಲ್ಲಿ ‘ಕೃಷಿ ಮೇಳ’ ಸಂಭ್ರಮ: ವಿವಿಯಿಂದ ಮೇಳಕ್ಕೆ ಅಚ್ಚುಕಟ್ಟು ವ್ಯವಸ್ಥೆ

ಬೆಂಗಳೂರು: ಇಂದಿನಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ‘ಕೃಷಿ ಮೇಳ’ ಸಂಭ್ರಮ ಮನೆ ಮಾಡಲಿದ್ದು, ಮೇಳಕ್ಕೆ ಮಳೆಯ ಆತಂಕ ಎದುರಾಗಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಗುರುವಾರ ಸಹ ಮಳೆ ಸುರಿದರೆ ಮೇಳದ ವೀಕ್ಷಕರಿಗೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ.

ಇಂದು ಮೇಳಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಚಾಲನೆ ನೀಡಲಿದ್ದಾರೆ. ಮೊದಲ ದಿನ ಪ್ರಗತಿ ಪರ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರತಿನಿತ್ಯ ಬೆಳಿಗ್ಗೆ 9 ರಿಂದ ಸಂಜೆ 6 ರ ತನಕ ಸಾರ್ವಜನಿಕರಿಗೆ ಮೇಳಕ್ಕೆ ಉಚಿತ ಪ್ರವೇಶವಿದೆ. ಜಿ.ಕೆ.ವಿ.ಕೆ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣ ತಲುಪಲು ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು ನಾಲ್ಕು ದಿನಗಳಿಂದ 15 ಲಕ್ಷ ಜನರು ಕೃಷಿ ಮೇಳ ವೀಕ್ಷಿಸುವ ಸಾಧ್ಯತೆಯಿದೆ.

ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜಿ.ಕೆ.ವಿ.ಕೆ ಮುಂಭಾಗದ ಜಕ್ಕೂರು ಏರೋಡ್ರಮ್‌ನಲ್ಲಿ ಬಸ್‌, ಮಿನಿ ಬಸ್‌, ಟೆಂಪೋ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಳದ ವೀಕ್ಷಕರಿಗೆ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ವಿವಿ ತಿಳಿಸಿದೆ. ವಿವಿಧ ಸಾಮಾಜಿಕ ಮಾಧ್ಯಮದಲ್ಲಿ ಮೇಳದ ನೇರ ಪ್ರಸಾರ ಆಗಲಿದೆ.