ಪುನೀತ್ ರಾಜ್ ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: 4 ಗಂಟೆಗೆ ಅದ್ಧೂರಿ ಕಾರ್ಯಕ್ರಮ: ಸಮಾರಂಭಕ್ಕೆ ಸಾಕ್ಷಿಯಾಗಲಿರುವ ನೂರಾರು ಗಣ್ಯರು

ಬೆಂಗಳೂರು: ಅಭಿಮಾನಿಗಳ ಆರಾಧ್ಯ ದೈವ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಸರ್ಕಾರ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಲಿದೆ. ಇಂದು ಸಂಜೆ 4 ಗಂಟೆಗೆ ವಿಧಾನ ಸೌಧದ ಮುಂಭಾಗ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಬಳಿ ಭವ್ಯ ವೇದಿಕೆ ಸಿದ್ಧವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ನೀಡಲಿದ್ದಾರೆ. ಸಮಾರಂಭದಲ್ಲಿ ತಮಿಳು ನಟ ರಜನಿಕಾಂತ್ ಮತ್ತು ತೆಲುಗಿನ ಜ್ಯೂನಿಯ್ ಎನ್’ಟಿಆರ್. ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ. ಇನ್ನು ರಾಜ್ಯದಿಂದಲೂ ಒಬ್ಬರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ಗಾಯಕ ವಿಜಯ ಪ್ರಕಾಶ್‌ ತಂಡದವರ ಗಾಯನ ಇರಲಿದೆ. ಕಾರ್ಯಕ್ರಮಕ್ಕೆ ಸುಮಾರು 5,000 ಪಾಸ್‌ ವಿತರಿಸಲಾಗಿದೆ.

ಇನ್ಫೋಸಿಸ್ ಫೌಂಡೇಷನ್’ನ ಮುಖ್ಯಸ್ಥರಾದ ಸುಧಾಮೂರ್ತಿಯವರಿಗೆ ಆಹ್ವಾನ ನೀಡಲಾಗಿದೆ. ಅಲ್ಲದೆ, ನಟ ಡಾ.ರಾಜ್ ಕುಮಾರ್ ಅವರ ಕುಟುಂಬದ 50 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.