ಬೆಂಗಳೂರು: 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಇಲಾಖೆ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಕನ್ನಡ ನಾಡು ಪುಣ್ಯದ ಬೀಡು, ಕರುನಾಡಿನಲ್ಲಿ ಹುಟ್ಟಬೇಕಾದರೆ ಏಳೇಳು ಜನ್ಮದದಲ್ಲಿ ಪುಣ್ಯ ಮಾಡಿರಬೇಕು. ಕರ್ನಾಟಕದ ಏಕೀಕರಣ ಹೋರಾಟವನ್ನು ಯಾರೂ ಮರೆಯುವಂತಿಲ್ಲ. ಮದ್ರಾಸ್ ಕರಾವಳಿ ಮಧ್ಯ ಕರ್ನಾಟಕ ಅಂತ ಹಂಚಿ ಹೋಗಿತ್ತು. ಆದರೆ, ಅದನ್ನ ಆಲೂರು ವೆಂಕಟರಾಯರು ಹೋರಾಟ ಮಾಡಿ ಕರ್ನಾಟಕ ಏಕೀಕರಣ ಮಾಡಿದರು. ಇದರಲ್ಲಿ ರಾಷ್ಟ್ರಕವಿ ಕುವೆಂಪು ಸೇರಿದಂತೆ ಮಹನೀಯರ ಶ್ರಮ ಇದೆ. ಶಿಕ್ಷಣ ಆರೋಗ್ಯ, ಉದ್ಯೋಗ ಜೊತೆ ಭಾರತದ ಭವಿಷ್ಯವನ್ನೂ ನಿರ್ಮಾಣ ಮಾಡುವ ಶಕ್ತಿ ಕರ್ನಾಟಕಕ್ಕೆ ಇದೆ ಎಂದು ಹೇಳಿದರು.