ಭಟ್ಕಳ: ಇಂದು ಕನ್ನಡ ನಾಡು, ನುಡಿ, ಪರಂಪರೆ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯನ್ನು ಆಚರಿಸುವ ದಿನವಾಗಿದೆ ಎಂದು ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ಹೇಳಿದರು. ಅವರು ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ತಾಲೂಕಿನಲ್ಲಿ ರಾಜ್ಯ ಸರ್ಕಾರದ ಕೋಟಿ ಕಂಠ ಗಾಯನದ ಜೊತೆಯಲ್ಲಿ ಅತ್ಯಂತ ಅದ್ದೂರಿ ಹಾಗೂ ವೈಶಿಷ್ಠ್ಯತೆಯಿಂದ ಕನ್ನಡದ ಹಬ್ಬವನ್ನು ಆಚರಿಸಿದ್ದೇವೆ ಎಂದ ಅವರು ಕನ್ನಡ ಎನ್ನುವುದು ಸಾಕಷ್ಟು ವರ್ಷ ಇತಿಹಾಸ ಹಾಗೂ ಸಾಹಿತ್ಯವುಳ್ಳ ಭಾಷೆಯಾಗಿದೆ. ಕನ್ನಡ ಭಾಷೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಪುರಸ್ಕ್ರತರು ಹೊಂದಿರುವ ಭಾಷೆ. ಕನ್ನಡ ಎಂಬುದೇ ಬಹಳಷ್ಟು ಸೊಗಸು. ನಮ್ಮ ಕನ್ನಡ ಭಾಷೆಯನ್ನು ದಿನ ನಿತ್ಯದ ವ್ಯವಹಾರ ಮತ್ತು ಆಡಳಿತದಲ್ಲಿ ಬಳಸುವುದರ ಜೊತೆಯಲ್ಲಿ ನಮ್ಮ ರಾಜ್ಯಕ್ಕೆ ಬಂದಿರುವ ಎಲ್ಲಾ ಇತರೆ ರಾಜ್ಯ , ರಾಷ್ಟ ಹಾಗೂ ಅಂತರರಾಷ್ಟ್ರೀಯ ಜನರಿಗೆ ಕನ್ನಡ ಭಾಷೆಯನ್ನು ಕಲಿಸುವ ಎಂದು ಪ್ರತಿಜ್ಞೆ ಮಾಡೋಣ ಎಂದರು.
ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಸುನೀಲ ನಾಯ್ಕ ಮಾತನಾಡಿ ಕನ್ನಡ ಭಾಷೆಗೆ ಒಂದು ಇತಿಹಾಸವಿದೆ. ಇದನ್ನು ನಮ್ಮ ನಾಡಿನ ಎಲ್ಲಾ ಕನ್ನಡಿಗರು ತಿಳಿದುಕೊಳ್ಳಬೇಕಿದೆ. ಕರ್ನಾಟಕದಲ್ಲಿನ ಇತಿಹಾಸ, ವೈವಿಧ್ಯತೆ, ಪರಂಪರೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಾಗ ಇದರ ಬಗ್ಗೆ ಅರಿವು ಮೂಡುತ್ತದೆ ಮತ್ತು ಕನ್ನಡಕ್ಕೆ ಕೊಡುವ ಗೌರವ ಹೆಚ್ಚುತ್ತದೆ ಎಂದರು.
ನನ್ನ ವಿಧಾನಸಭಾ ಕ್ಷೇತ್ರದ ಮುರುಡೇಶ್ವರದಲ್ಲಿನ ಅತಿ ಹೆಚ್ಚು ಶಿಲ್ಪಿಗಳು ದೇಶದ ವಿವಿಧ ರಾಜ್ಯಗಲ್ಲಿ ಹಾಗೂ ಹೊರ ದೇಶಗಳಲ್ಲಿ ದೇವಸ್ಥಾನ ನಿರ್ಮಾಣ ಮಾಡುತ್ತಿರುವುದು ಕನ್ನಡಿಗರಾದ ನಮಗೆ ಹೆಮ್ಮೆ ಎನಿಸುತ್ತದೆ. ಹಾಗೂ ನಮ್ಮ ಭಟ್ಕಳ ನೆಲದ ಗಟ್ಟಿ ಸಂಸ್ಕೃತಿಯನ್ನು ವಿಶ್ವ ವಿಖ್ಯಾತ ಮೈಸೂರಿನ ಜಂಬೂ ಸವಾರಿಯಲ್ಲಿ ಪರಿಚಯಸಿದ ಗೊಂಡ ಸಮಾಜದ ಢಕ್ಕೆ ಕುಣಿತದ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ಮನೆ ಮನಗಳಲ್ಲಿ ಇರಬೇಕಾದ ಕನ್ನಡ ಇಂದು ನಶಿಸುತ್ತಿದೆ. ಅಡುಗೆ ಮನೆಗೂ ಆಂಗ್ಲ ಭಾಷೆ ಹರಡಿದೆ. ಈ ಹಿಂದಿನ ವರ್ಷದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಸಹಿ ಹಾಕಿ ಭಾಷೆಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.
ಈ ವೇಳೆ ಕನ್ನಡದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಕನ್ನಡ ನಾಡು ನುಡಿ ಹಾಗೂ ವೈಶಿಷ್ಟ್ಯತೆ ಬಗ್ಗೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಉಪನ್ಯಾಸ ಕಾರ್ಯಕ್ರಮ ನೀಡಿದರು.
ಇದಕ್ಕೂ ಪೂರ್ವದಲ್ಲಿ ತಾಲೂಕಾ ಆಡಳಿತ ಸೌಧದ ಆವರಣದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕ ಪೂಜೆ ಸಲ್ಲಿಸಲಾಯಿತು. ನಂತರ ಶಾಸಕ ಸುನೀಲ ನಾಯ್ಕ ದೀಪ ಬೆಳಗಿಸಿ ಹಸಿರು ನಿಶಾನೆ ತೋರುವುದರ ಮೂಲಕ ಮೆರವಣಿಗೆ ಚಾಲನೆ ನೀಡಿದರು. ಮೆರವಣಿಗೆ ಅಲ್ಲಿಂದ ಶಂಸುದ್ದಿನ ಸರ್ಕಲ್ ಮೂಲಕ ಜಾಲಿ ಕ್ರಾಸ್ ಮಾರ್ಗವಾಗಿ ತಾಲೂಕಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ಈ ಮೆರಮಣಿಗೆ ಉದ್ದಕ್ಕೂ ತಾಲೂಕಿನ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಭಟ್ಕಳ ಜನತೆಯ ಮನಸೂರೆಗೊಂಡವು. ನಂತರ ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಮಂತ ಬಿ, ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕಾರ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ಸುರೇಶ, ಪುರಸಭೆ ಅಧ್ಯಕ್ಷ ಪರ್ವೇಜ್ ಕಾಸಿಂ ಜೀ, ಮುಂತಾದವರು ಉಪಸ್ಥಿತರಿದ್ದರು.