ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಿಂತಿದ್ದೇಕೆ.? ಬಿಬಿಎಂಪಿ ಮುಖ್ಯ ಆಯುಕ್ತರು ಹೇಳಿದ್ದೇನು.?

ಬೆಂಗಳೂರು: ರಾಜಕಾಲುವೆ ಒತ್ತುವರಿ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಕೆಲವರು ಕೋರ್ಟ್ ಮೊರೆ ಹೋಗಿರುವುದರಿಂದ ಒತ್ತುವರಿ ತೆರವು ಕಾರ್ಯಚರಣೆಗೆ ಸ್ವಲ್ಪ ಹಿನ್ನಡೆಯಾಗಿದೆ. ಕೋರ್ಟ್‍ನಲ್ಲಿ ನಾವು ನಮ್ಮ ವಾದ ಮಂಡನೆ ಮಾಡುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಖಾಲಿ ಜಾಗಗಳು ಹಾಗೂ ಕಂಪೌಂಡ್‍ಗಳಿರುವ ಪ್ರದೇಶಗಳ ಒತ್ತುವರಿ ತೆರವು ಕಾರ್ಯಚರಣೆ ಮುಂದುವರೆಸಿದ್ದೇವೆ. ಜೊತೆಗೆ ಒತ್ತುವರಿ ಗುರುತು ಮಾಡಲು ಸರ್ವೆಯರ್ಸ್ ಕೊರತೆ ಇದೆ ಎನ್ನುವುದನ್ನು ಈ ವೇಳೆ ಆಯುಕ್ತರು ಒಪ್ಪಿಕೊಂಡರು. ಇದುವರೆಗೂ ನಾವು ಮಹಾದೇವಪುರ ವಲಯದಲ್ಲಿ ತೆರವು ಕಾರ್ಯಚಾರಣೆ ನಡೆಸಿದ್ದೆವು. ಇದೀಗ ಬೇರೆ ಬೇರೆ ವಲಯಗಳಲ್ಲಿಯೂ ಒತ್ತುವರಿ ಆಗಿರುವುದು ಕಂಡುಬಂದಿದ್ದು, ಶೀಘ್ರದಲ್ಲೇ ಅಲ್ಲಿಯೂ ಒತ್ತುವರಿ ತೆರವು ಕಾರ್ಯಚರಣೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.