ಮುಡಗೇರಿ ಸಂತ್ರಸ್ತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ – ಶಾಸಕಿ ರೂಪಾಲಿ ನಾಯ್ಕ್ ಭರವಸೆ

ಕಾರವಾರ: ಮುಡಗೇರಿ ಕೈಗಾರಿಕಾ ಪ್ರದೇಶದಲ್ಲಿ ಭೂ ಸ್ವಾಧೀನಕ್ಕೆ ಒಳಗಾದ ಸಂತ್ರಸ್ತರಿಗೆ ಸರ್ಕಾರದಿಂದ ಹೆಚ್ಚುವರಿ ಪರಿಹಾರ ಕೊಡಿಸುವುದಾಗಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ಎಸ್. ನಾಯ್ಕ ಭರವಸೆ ನೀಡಿದ್ದಾರೆ.

ಮುಡಗೇರಿಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಂತ್ರಸ್ತರ ಸಭೆ ನಡೆಸಿದ ಶಾಸಕಿ ರೂಪಾಲಿ ಎಸ್.ನಾಯ್ಕ, ಕೈಗಾರಿಕಾ ಪ್ರದೇಶದಲ್ಲಿ ಮೊದಲ ಹಂತದ 73 ಎಕರೆಯಷ್ಟು ಪ್ರದೇಶದ ಭೂಮಿ ಕಳೆದುಕೊಂಡವರು ಹೆಚ್ಚಿನ ಪರಿಹಾರ ನೀಡಬೇಕೆಂದು ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದರು. ಕಳೆದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಕೈಗಾರಿಕಾ ಸಚಿವರಾದ ಶ್ರೀ ಮುರುಗೇಶ ನಿರಾಣಿ ಭೇಟಿ ಮಾಡಿ ಮುಡಗೇರಿ ಸಂತ್ರಸ್ತರ ಪರವಾಗಿ ಮನವಿಯನ್ನು ಮಾಡಿ, ಹೆಚ್ಚುವರಿ ಪರಿಹಾರ ನೀಡುವಂತೆ ವಿನಂತಿಸಿದ್ದೇನೆ. ಭೂಮಿ ಕಳೆದುಕೊಂಡವರಿಗೆ ನಿರಾಸೆಯಾಗದಂತೆ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದೇನೆ. ಸಚಿವರೂ ಕೂಡ ಈ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.

ಭೂಮಿ ಕಳೆದುಕೊಂಡವರು ಆತಂಕ ಪಡಬೇಕಿಲ್ಲ. ಹೆಚ್ಚುವರಿ ಪರಿಹಾರದ ನಿಮ್ಮ ಬೇಡಿಕೆಯನ್ನು ಈಡೇರಿಸಲು ನಾನು ಬದ್ಧನಾಗಿದ್ದು, ಈ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಿ ನ್ಯಾಯ ದೊರಕಿಸಿಕೊಡುವುದಾಗಿ ಶಾಸಕರು ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯರು ಹಾಗು ಮತ್ತಿತರು ಪಾಲ್ಗೊಂಡಿದ್ದರು.