ಇಂದು ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ: ಡಾ. ರಾಜ್​ಕುಮಾರ್​ ಕುಟುಂಬದ ಸದಸ್ಯರಿಂದ ಅಪ್ಪು ಸಮಾಧಿಗೆ ಪೂಜೆ

ಬೆಂಗಳೂರು: ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಿಧನರಾಗಿ ಒಂದು ವರ್ಷ ಕಳೆದಿದ್ದು, ಇಂದು ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ  ಪ್ರಯುಕ್ತ ಅಪ್ಪು ಸಮಾಧಿಗೆ ಡಾ. ರಾಜ್​ಕುಮಾರ್​ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಕೂಡ ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸುತ್ತಿದ್ದಾರೆ.

ಅಶ್ವಿನಿ ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ, ಅಪ್ಪು ಆಪ್ತರು ಮತ್ತು ಸ್ನೇಹಿತರು ಕೂಡ ಜೊತೆಗೆ ಆಗಮಿಸಿದ್ದಾರೆ.

ಸಮಾಧಿ ಬಳಿ ಪೂಜೆ ಮುಗಿದ ನಂತರ ಪುನೀತ್​ ರಾಜ್​ಕುಮಾರ್​ ನಿವಾಸದಲ್ಲಿ ವರ್ಷದ ಕಳಸ ಪೂಜೆ ನಡೆಯಲಿದ್ದು, ಅಪ್ಪುಗೆ ಇಷ್ಟವಾದ ತಿನಿಸುಗಳನ್ನು ಇಟ್ಟು ಪೂಜೆ ನಡೆಸಲಾಗುತ್ತದೆ. ಪೂಜೆ ಸಲುವಾಗಿ ಶಿವಣ್ಣ ದಂಪತಿ ಮುಂಜಾನೆಯೇ ಅಪ್ಪು ನಿವಾಸಕ್ಕೆ ಹೋಗಿ ಬಂದಿದ್ದಾರೆ. ಡಾ. ರಾಜ್​ಕುಮಾರ್​ ಹುಟ್ಟೂರಾದ ಗಾಜನೂರಿನಿಂದಲೂ ಅನೇಕ ಬಂಧುಗಳು, ಸದಾಶಿವನಗರದಲ್ಲಿರುವ ಪುನೀತ್​ ಮನೆಗೆ ಆಗಮಿಸಿದ್ದಾರೆ. ಮನೆ ಮುಂದಿನ ಗಣೇಶನಿಗೆ ಅಭಿಷೇಕ ಮಾಡಿ ಪೂಜೆ ನೆರವೇರಿಸಿದ್ದಾರೆ.

‘ಗೀತನಮನ’ ಕಾರ್ಯಕ್ರಮ

ಅಪ್ಪು ಪುಣ್ಯಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ತಡರಾತ್ರಿ 12 ಗಂಟೆಯಿಂದಲೇ ಗೀತನಮನ ಕಾರ್ಯಕ್ರಮ ಶುರುವಾಗಿದೆ. 24 ಗಂಟೆಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮ ಇಂದು ರಾತ್ರಿ 12 ಗೆಂಟೆವರೆಗೂ ಜರುಗಲಿದೆ. ಸಾಧು ಕೋಕಿಲ ನೇತೃತ್ವದಲ್ಲಿ ಕನ್ನಡದ ಗಾಯಕರು ಅಪ್ಪು ಚಿತ್ರದ ಹಾಡುಗಳ ಮೂಲಕ ಪರಮಾತ್ಮನಿಗೆ ಗೀತ ನಮನ ಸಲ್ಲಿಸುತ್ತಿದ್ದಾರೆ.