ನಾಡಪ್ರಭು ಕೆಂಪೇಗೌಡರ ಪ್ರತಿಮೆ ರಾಜ್ಯದ ಹೆಗ್ಗುರುತಾಗಲಿದೆ – ಅಶ್ವಥ್ ನಾರಾಯಣ್

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಪ್ರತಿಮೆಯು ರಾಜ್ಯದ ಹೆಗ್ಗುರುತಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂಬ ಉದ್ದೇಶ ಹಿಂದಿನ ಸರ್ಕಾರಗಳಿಗೆ ಇದ್ದರೂ ಎಲ್ಲಿ ನಿರ್ಮಿಸಬೇಕು ಎಂಬುದು ತೀರ್ಮಾನವಾಗಿರಲಿಲ್ಲ. ನಮ್ಮ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಬಳಿ ಈ ಪ್ರಸ್ತಾವನೆ ಮುಂದಿಟ್ಟಾಗ, ಒಪ್ಪಿಗೆ ಕೊಟ್ಟ ಅವರು ಜವಾಬ್ದಾರಿಯನ್ನೂ ವಹಿಸಿದರು.

ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಥೀಮ್ ಪಾರ್ಕ್ ನಿರ್ಮಿಸುವುದಕ್ಕೆ ಅನುಮೋದನೆ ಕೊಟ್ಟರು’ ಎಂದರು. ನಿರ್ಮಾಣ ಗೊಂಡಿರುವ ಕೆಂಪೇಗೌಡರ ಪ್ರತಿಮೆಯಲ್ಲಿ ಖಡ್ಗವು ಒರೆಯಿಂದ ಹೊರಗೆ ಬಂದ ಸ್ಥಿತಿಯಲ್ಲಿ ಇದೆ. ಎತ್ತಿನ ಬಂಡಿಯ ಪರಿಕಲ್ಪನೆಯನ್ನೂ ಅಲ್ಲಿ ಅಳವಡಿಸಿದ್ದೇವೆ. ಭೂದೃಶ್ಯಗಳಲ್ಲಿ ಕೆಂಪೇಗೌಡರು ಕೆರೆ ಕಟ್ಟೆಗಳನ್ನು ನಿರ್ಮಿಸಿರುವುದಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದೇವೆ. ಆರೇಳು ತಿಂಗಳಿನಲ್ಲಿ ಥೀಮ್ ಪಾರ್ಕ್ ಕಾಮಗಾರಿಗಳು ಮುಗಿಯಲಿವೆ’ ಎಂದು ಹೇಳಿದ್ದಾರೆ.