ಟ್ವಿಟ್ಟರ್ ಸಂಸ್ಥೆಯಲ್ಲಿ ಮಹತ್ವದ ಬೆಳವಣಿಗೆ.! ಪರಾಗ್ ಅಗರ್ವಾಲ್ ಸೇರಿದಂತೆ ಉನ್ನತಾಧಿಕಾರಿಗಳು ವಜಾ.!

ನ್ಯೂಯಾರ್ಕ್:ಎಲಾನ್ ಮಸ್ಕ್ ಟ್ವಿಟ್ಟರ್ ಮಾಲೀಕರಾಗಿ ನಿಯಂತ್ರಣ ತೆಗೆದುಕೊಂಡ ಬೆನ್ನಲ್ಲೇ ಟ್ವೀಟರ್‌ ಸಿಐಓ ಭಾರತೀಯ ಪರಾಗ್‌ ಅಗರ್ವಾಲ್‌ ಸೇರಿದಂತೆ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿದ್ದಾರೆ. 44 ಶತಕೋಟಿ ಡಾಲರ್‌ಗೆ ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಗುರುವಾರ ತಡರಾತ್ರಿ ಪೂರ್ಣಗೊಳಿಸಿದ್ದಾರೆ.

ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ತಕ್ಷಣವೇ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಮಸ್ಕ್ ಕಂಪನಿಯ ಉನ್ನತ ಮಟ್ಟದ ಹುದ್ದೆಯಲ್ಲಿದ್ದ ಹಲವರನ್ನು ವಜಾಗೊಳಿಸಿದ್ದಾರೆ. ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್, ಸಿಎಫ್‌ಒ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರ-ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ಹೊರ ಹಾಕಿರುವುದಾಗಿ ಅಮೆರಿಕದ ಪ್ರಮುಖ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಮಸ್ಕ್ ಅವರು ಟ್ವಿಟರ್ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯಲು ಯತ್ನಿಸಿದಾಗ ಅಗರ್ವಾಲ್ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿ ಹಿನ್ನಡೆ ಆಗಬಹುದು ಎಂಬ ಭೀತಿಯಿಂದ ಮಸ್ಕ್ ಟ್ವಿಟ್ಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಟ್ವಿಟ್ಟರ್ ಖರೀದಿ ಪ್ರಕ್ರಿಯೆಗೆ ನ್ಯಾಯಾಲಯವು ವಿಧಿಸಿದ್ದ ಗಡುವು ಪೂರ್ಣಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವಾಗ ಈ ಮಹತ್ವದ ಬೆಳವಣಿಗೆ ನಡೆದಿದೆ.