ಪ್ರಧಾನಿ ಹುದ್ದೆಗೇರುವ ‘ರಿಷಿ’ ಹಾದಿ ಸುಗಮ: ‘ಸುನಕ್’ ಆಯ್ಕೆ ಬಹುತೇಕ ಖಚಿತ.!

ಬ್ರಿಟನ್: ಇಂಗ್ಲೆಂಡ್‌ನ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ರಿಷಿ ಸುನಕ್‌ ಪ್ರಧಾನಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.​ ಪ್ರಧಾನಿ ಹುದ್ದೆ ರೇಸ್​ನಲ್ಲಿದ್ದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ರೇಸ್​ನಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪ್ರಧಾನಿ ಹುದ್ದೆ ರೇಸ್​​ನಿಂದ ಹಿಂದೆ ಸರಿದಿರುವ ಬೋರಿಸ್ ಜಾನ್ಸನ್ ಭಾರತೀಯ ಮೂಲದ ರಿಷಿ ಸುನಕ್​ಗೆ ಬೆಂಬಲ ನೀಡಿದ್ದಾರೆ. ಈ ಮೂಲಕ ಬ್ರಿಟನ್ ಮಾಜಿ ಸಚಿವ ರಿಷಿ ಸುನಕ್​ ಪ್ರಧಾನಿ ಗಾದಿಗೆ ಏರುವ ಹಾದಿ ಮತ್ತಷ್ಟು ಸುಗಮವಾದಂತಾಗಿದೆ.

ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುನ್ನ ಯಾವುದೇ ಓರ್ವ ಅಭ್ಯರ್ಥಿ ತನಗೆ 156 ಕ್ಕಿಂತ ಹೆಚ್ಚಿನ ಸದಸ್ಯರ ಬೆಂಬಲ ಇದೆ ಎಂದು ಸಾಬೀತುಪಡಿಸಿದರೆ, ಆ ಅಭ್ಯರ್ಥಿ ಜೊತೆಗೆ ಇನ್ನೋರ್ವ ವ್ಯಕ್ತಿಗೆ ಮಾತ್ರ ಕಣಕ್ಕೆ ಇಳಿಯಲು ಅವಕಾಶ ಸಿಗಲಿದೆ. ಒಂದು ವೇಳೆ ಯಾರೂ 156 ಕ್ಕಿಂತ ಹೆಚ್ಚಿನ ಮತ ಪಡೆಯದೇ ಇದ್ದರೆ ಕನಿಷ್ಠ 3 ಜನರಿಗೆ ಕಣಕ್ಕೆ ಇಳಿಯಲು ಅವಕಾಶ ಸಿಗಲಿದೆ. ಈ ಪೈಕಿ ಹೆಚ್ಚಿನ ಮತ ಪಡೆದ ಇಬ್ಬರು ಅಂತಿಮ ಹಂತಕ್ಕೆ ಆಯ್ಕೆಯಾಗುತ್ತಾರೆ.