ಬೆಂಗಳುರು: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ, ಆಡಳಿತ ಸುಧಾರಣೆಯ ಹೆಸರಿನಲ್ಲಿ ಕೆಲ ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ಆಡಳಿತದ ದೃಷ್ಟಿಯಿಂದ ಕಾಲ ಕಾಲಕ್ಕೆ ಅಧಿಕಾರಿಗಳ ವರ್ಗಾವಣೆ ಮಾಡುವುದಕ್ಕೆ ಆಕ್ಷೇಪ ಇಲ್ಲ. ಆದರೆ, ಕೆಲವು ಮಹತ್ವದ ಯೋಜನೆಗಳು, ಕಾರ್ಯಗಳು ಜಾರಿಯಲ್ಲಿ ಇರುವಾಗ ಆ ಭಾಗದ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿರುವಾಗ ಏಕಾ ಏಕಿ ವರ್ಗಾವಣೆ ಮಾಡುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸಿದ್ದಾರೆ.
ಮುಂದೂಡಲ್ಪಡುತ್ತಿರುವ ಈ ಸಮ್ಮೇಳನ ಕೊನೆಗೂ ಬರುವ ಜ. 6 ,7 ಹಾಗೂ 8 ರಂದು ನಡೆಸಲು ಸರ್ಕಾರ ಘೋಷಿಸಿದೆ. ಅದಕ್ಕೆ ತಕ್ಕಂತೆ ಕಸಾಪ ಮತ್ತು ಹಾವೇರಿ ಜಿಲ್ಲಾಡಳಿತ ಸೇರಿ ಸಕಲ ಸಿದ್ಧತೆಗಳನ್ನು ಹಮ್ಮಿಕೊಂಡಿತ್ತು. ಇದೇ ತಿಂಗಳ 27 ರಂದು ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಗಳು ಸೇರಿದಂತೆ ತಜ್ಞರ ಸಭೆಯನ್ನೂ ಕರೆಯಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.