ಬೆಂಗಳೂರು: ಕೋವಿಡ್ ನಿಂದ ಸ್ಥಗಿತಗೊಂಡ ಕೈಗಾರಿಕಾ ಘಟಕಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ. ನಾಗರಾಜ್ ತಿಳಿಸಿದ್ದಾರೆ. ಈ ಕುರಿತು ಅವರು ವಿಧಾನಸೌಧದಲ್ಲಿ ಮಾತನಾಡಿದರು.
ಮುಚ್ಚಲ್ಪಟ್ಟಿರುವ ಘಟಕಗಳು ಯಾವ ಕಾರಣಗಳಿಂದಾಗಿ ಮುಚ್ಚಲ್ಪಟ್ಟಿವೆ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗೆ ಸೂಚಿಸಲಾಗಿದೆ. ಇದರ ಜೊತೆಗೆ ಹೊಸ ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ತಾಲ್ಲೂಕು ಮಟ್ಟದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುತ್ತಿದೆ.
ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ ಅಂಡ್ ಇನೊವೇಶನ್ ಯೋಜನೆಗೆ ಬರಬೇಕಾದ ರೂ. 2.65 ಕೋಟಿ ಬಾಕಿ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡಲಾಗುತ್ತದೆ. ನೆಲಮಂಗಲ ಕೈಗಾರಿಕಾ ವಸಾಹತುವಿಗೆ ಸಂಬಂಧಿಸಿದ ಸಮಸ್ಯೆಗಳು, ಕೈಗಾರಿಕಾ ಘಟಕಗಳಿಗೆ ವಿಧಿಸುತ್ತಿರುವ ಆಸ್ತಿ ತೆರಿಗೆ ಹಾಗೂ ಇತರೆ ಸಮಸ್ಯೆಗಳ ಕುರಿತು ಕಾಸಿಯಾ ಸಲ್ಲಿಸಿದ್ದ ಬೇಡಿಕೆ ಕುರಿತಂತೆ ಅಧಿಕಾರಿಗಳ ಮಟ್ಟದಲ್ಲಿ ಸಭೆ ಆಯೋಜಿಸಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.



