ಭಟ್ಕಳ: ದೇಶದಲ್ಲೆಡೆ ಸದ್ದು ಮಾಡುತ್ತಿರುವ ಜಾನುವಾರುಗಳ ಮಾರಕ ರೋಗ ಲಂಪಿ ಸ್ಕಿನ್ ಡಿಸೀಸ್ ನ ಮೊದಲ ಪ್ರಕರಣ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದು, ಇದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪಶು ವೈದ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ಸಾಯಂಕಾಲ ಮೊದಲ ಬಾರಿಗೆ ದನವೊಂದರಲ್ಲಿ ಈ ರೋಗ ಕಾಣಿಸಿಕೊಂಡಿದೆ. ತಾಲೂಕಿನಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದ್ದು, ಇದಕ್ಕೆ ಬೇಕಾದ ಎಲ್ಲ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ. ಇದೊಂದು ದನಗಳಲ್ಲಿ ಕಾಣಿಸಿಕೊಳ್ಳುವ ವೈರಸ್ ಆಗಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗವಲ್ಲ. ಇದರ ಹಾಲನ್ನು ಕೂಡ ಕುದಿಸಿ ಕುಡಿಯಬಹುದು. ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಮಾಹಿತಿ ನೀಡಿದರು.
ಈ ರೋಗವು ಉತ್ತರಭಾರದಲ್ಲಿ ಬಹಳಷ್ಟು ಕಾಣಿಸಿಕೊಂಡಿದ್ದು, ನಮ್ಮ ರಾಜ್ಯದಲ್ಲೂ ಈ ರೋಗ ಉಲ್ಭಣಗೊಳ್ಳುತ್ತಿದೆ. ಸೊಳ್ಳೆಗಳಿಂದ, ಗಾಳಿಗಳಿಂದ ಈ ರೋಗ ಹರಡುತ್ತಿದೆ. ಇದಕ್ಕೆ ಚಿಕಿತ್ಸೆ ಇದೆ. ಶನಿವಾರ ಸಾಯಂಕಾಲ ವಾಟ್ಸಪ್ ನಲ್ಲಿ ಲಂಪಿ ವೈರಸ್ ಪೀಡಿತ ಹೋರಿಯ ವಿಡಿಯೋ ವೈರಲ್ ಆಗುತ್ತಿದ್ದು ಈ ಕುರಿತಂತೆ ಜನರು ವಿವಿಧ ರೀತಿಯ ಸುದ್ದಿಗಳನ್ನು ಹರಡುತ್ತಿದ್ದಾರೆ.