‘ಸೆಪ್ಟೆಂಬರ್​ ​13’ ಸಿನೆಮಾಕ್ಕೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ನೀಡಿದ ರಾಜ್ಯ ಸರ್ಕಾರ

ಕೋವಿಡ್​ ಸಮಯದಲ್ಲಿ ದಾದಿಯರ ಸೇವೆ, ತ್ಯಾಗ ಎತ್ತಿ ಹಿಡಿಯುವ ಸೆಪ್ಟೆಂಬರ್​ ​13 ಸಿನೆಮಾಕ್ಕೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.

ನಿರ್ಮಾಪಕ ಐವಾನ್ ನಿಗ್ಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ನ. 4 ರಿಂದ ರಾಜ್ಯದಲ್ಲಿ ಪ್ರದರ್ಶನಗೊಳ್ಳಲಿರುವ ‘ಸೆಪ್ಟೆಂಬರ್ 13’ ಕನ್ನಡ ಚಲನಚಿತ್ರಕ್ಕೆ ಶೇ. 100 ರಷ್ಟು ತೆರಿಗೆ ವಿನಾಯಿತಿ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಚಿತ್ರದ ಕಥಾ ಹಂದರವು ಕೋವಿಡ್ ಕಾಲದಲ್ಲಿ ದಾದಿಯರ ಸೇವೆ, ತ್ಯಾಗ ಎತ್ತಿ ಹಿಡಿಯುವ ಆಶಯವನ್ನು ಒಳಗೊಂಡಿದೆ. ಇದರ ಜೊತೆಗೆ ಈ ಚಿತ್ರವು ವೈದ್ಯಕೀಯ ವಲಯದವರ ಗೌರವಾರ್ಥ ಸ್ಮರಿಸುವ ಬಗ್ಗೆ ಸಂದೇಶ ಸಾರುತ್ತದೆ ಎಂದು ಮನವಿಯಲ್ಲಿ ನಿರ್ಮಾಪಕರು ತಿಳಿಸಿದ್ದರು.

ಹಾಗಾಗಿ ಈ ಮನವಿಯನ್ನು ಪರಿಗಣಿಸಿ, ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಿದರೆ, ದೇಶದ ಇನ್ನಷ್ಟು ಜನರಿಗೆ ಈ ಸಂದೇಶ ಮುಟ್ಟಿಸುವಲ್ಲಿ ಸಹಕಾರಿಯಾಗುವುದರಿಂದ ಸೂಕ್ತ ಆದೇಶ ಹೊರಡಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದರು. ಅವರ ನಿರ್ದೇಶನದನ್ವಯ ತೆರಿಗೆ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.