ಬೆಂಗಳೂರು: ಮೂರನೇ ದಿನಕ್ಕೆ ಕಾಲಿಟ್ಟ ಹಲಾಲ್ ಮುಕ್ತ ದೀಪಾವಳಿ ಕ್ಯಾಂಪೇನ್ ಇಂದು ಜಯನಗರ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುತ್ತಿದೆ.
ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿರುವ ಮ್ಯಾಕ್ ಡೊನಾಲ್ಡ್ ನಲ್ಲಿ ಹಲಾಲ್ ಸರ್ಟಿಫಿಕೇಟ್ ಹಾಕಿರುವುದರಿಂದ ಹಿಂದೂಪರ ಸಂಘಟನೆಗಳು ಮುತ್ತಿಗೆ ಹಾಕಿವೆ. ಅಲ್ಲದೇ ಮೇಘನ ಫುಡ್ಸ್ ನಲ್ಲಿ ಹಲಾಲ್ ಬೋರ್ಡ್ ಹಾಕಿರುವ ಹಿನ್ನೆಲೆ ಕಾರ್ಯಕರ್ತರು ಗಲಾಟೆ ನಡೆಸಿ, ಬೋರ್ಡ್ ಗೆ ಮಸಿಯನ್ನು ಬಳಿದಿದ್ದಾರೆ.
ಇನ್ನೂ ಜಯನಗರದ ಅಂಗಡಿಗಳಿಗೆ, ಶಾಪಿಂಗ್ ಕಾಂಪ್ಲೆಕ್ಸ್, ಆಟೋ ಸೇರಿದಂತೆ ಇತರ ವಾಹನ ಸವಾರರಿಗೆ ಕರಪತ್ರ ಹಂಚುವ ಮೂಲಕ ಹಲಾಲ್ ಮುಕ್ತ ದೀಪಾವಳಿ ಅಭಿಯಾನವನ್ನು ಮಾಡಿದ್ದಾರೆ. ಈ ಅಭಿಯಾನದಲ್ಲಿ ರಾಷ್ಟ್ರ ರಕ್ಷಣಾ ಪಡೆ, ಸನಾತನ ಹಿಂದೂ ಪ್ರತಿಷ್ಟಾನ, ಹಿಂದು ಜನಜಾಗೃತಿ ಸಮಿತಿ ಸೇರಿದಂತೆ ಹಲವು ಹಿಂದೂ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು.