ಬೆಂಗಳೂರು: ಬೈಯ್ಯಪ್ಪನಹಳ್ಳಿ – ವೈಟ್‌ಫೀಲ್ಡ್ ನಡುವಿನ ಮೆಟ್ರೋ ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು, ಅಕ್ಟೋಬರ್ 25 ಕ್ಕೆ ಟ್ರಯಲ್ ರನ್ ನಡೆಸಲು ಚುರುಕಿನ ಸಿದ್ಧತೆಗಳು ನಡೆಯುತ್ತಿವೆ. ಹೊಸ ಮಾರ್ಗದಲ್ಲಿ ಟ್ರಯಲ್ ರನ್ ನಡೆಸುವ ಉದ್ದೇಶದಿಂದ ರೈಲು ಕೋಚ್‌ಗಳನ್ನು ನಿಲ್ದಾಣಕ್ಕೆ ರವಾನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
6 ಕೋಚ್‌ಗಳ 1 ಟ್ರೈನ್ ಅನ್ನು ರಸ್ತೆ ಮೂಲಕ ರವಾನೆ ಮಾಡಲಾಗುತ್ತಿದ್ದು, 1 ಕೋಚ್‌ಗೆ 9.85 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಹೀಗಾಗಿ ಹೊಸ ರೈಲು 59.1 ಕೋಟಿ ರೂ. ಬೆಲೆ ಬಾಳಲಿದೆ. ಕಪ್ಲಿಂಗ್, ಟೆಸ್ಟಿಂಗ್ ಎಲ್ಲವೂ ನಡೆದಿದೆ. ಇದೇ ಅಕ್ಟೋಬರ್ 25 ರಂದು ಪ್ರಯೋಗಾರ್ಥ ಪರೀಕ್ಷೆ ನಡೆಯಲಿದೆ. ನವೆಂಬರ್ ಅಂತ್ಯದಲ್ಲಿ 2 ನೇ ರೈಲು ಹಾಗೂ ಡಿಸೆಂಬರ್ ಅಂತ್ಯದಲ್ಲಿ 3 ನೇ ರೈಲಿನ ಟ್ರಯಲ್ ರನ್ ನಡೆಯಲಿದೆ.
ರೈಲ್ವೆ ಸೇಫ್ಟಿ ಕಮಿಷನರ್ ಪರಿಶೀಲನೆ ಬಳಿಕ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ. ಟ್ರಯಲ್ ರನ್ ಬಳಿಕ 45 ದಿನಗಳಲ್ಲಿ ರೈಲ್ವೆ ಸೇಫ್ಟಿ ಕಮಿಷನರ್‌ರಿಂದ ಪರೀಕ್ಷೆ ನಡೆಯಲಿದೆ. ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ 15 ಕಿ.ಮೀ ಉದ್ದದ ಮಾರ್ಗ ಇದಾಗಿದ್ದು, ಐಟಿ-ಬಿಟಿ ಮಂದಿಗೆ ಇನ್ನಷ್ಟು ರಿಲೀಫ್ ಸಿಗಲಿದೆ. ಈಗಾಗಲೇ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 5 ಲಕ್ಷಕ್ಕೂ ಹೆಚ್ಚಿದ್ದು, ಈ ಮಾರ್ಗವೂ ಶುರುವಾದರೆ 7-8 ಲಕ್ಷಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ.