ಮಂಡ್ಯ: ಮಂಡ್ಯದ ಕೆಆರ್ಪೇಟಿಯ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸುವ ನಿರೀಕ್ಷೆ ಇತ್ತು. ಆದರೆ ಕುಂಭ ಮೇಳಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೈರಾಗಲಿದ್ದಾರೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿಗೆ ಯೋಗಿ ಜೀ ಪತ್ರ ಬರೆದಿದ್ದು ಪ್ರವಾಹಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಇರುವುದರಿಂದ ಕುಂಭ ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಯೋಗೀಜಿ ಪತ್ರದಲ್ಲೇನಿದೆ.?
ಮಹದೇಶ್ವರ ಕುಂಭ ಮೇಳದಲ್ಲಿ ಭಾಗಿಯಾಗಲು ಆಹ್ವಾನಿಸಿದ್ದಕ್ಕೆ ನಾನು ಕೃತಜ್ಞ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಗಂಗಾ, ಯಮುನಾ, ಸರಸ್ವತಿ 3 ಪವಿತ್ರ ನದಿಗಳ ಸಂಗಮದಲ್ಲಿ ಕುಂಭ ಮೇಳ ಆಯೋಜಿಸಲಾಗುತ್ತದೆ. ಅದರಂತೆ ಕರ್ನಾಟಕದ ತ್ರಿವೇಣಿ ಸಂಗಮದಲ್ಲೂ ಕುಂಭ ಮೇಳ ಆಯೋಜಿಸಿರುವುದು ತಿಳಿದಾಗ ಹೃದಯ ತುಂಬಿ ಬಂತು. ಕಾವೇರಿ, ಹೇಮಾವತಿ, ಲಕ್ಷಣ ತೀರ್ಥ ನದಿಗಳ ಸಂಗಮದಲ್ಲಿ ನಡೆಯುವ ಕುಂಭ ಮೇಳಕ್ಕೆ ಬರಲು ಇಚ್ಛಿಸಿದ್ದೆ. ಆದರೆ ಉತ್ತರ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಾಗಾಗಿ ಕರ್ನಾಟಕದ ಕುಂಭ ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಕುಂಭ ಮೇಳವೂ ಸಾಮಾಜಿಕ ಸಾಮರಸ್ಯ ಮತ್ತು ಐಕ್ಯತೆ ಸಾಧಿಸಲಿ ಎಂದು ಕುಂಭಮೇಳದ ಯಶಸ್ಸಿಗೆ ಯೋಗಿ ಶುಭ ಹಾರೈಸಿದ್ದಾರೆ.