ಬಣ್ಣ ಮಾಸಿದ ರಾಷ್ಟ್ರಧ್ವಜ ಹಾರಿಸಿ ಧ್ವಜಕ್ಕೆ ಅವಮಾನ ಮಾಡಿದ ಬೆಳಕೆ ಪಂಚಾಯಿತಿ

ಭಟ್ಕಳ: ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಆದೇಶದಂತೆ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಕಲ ಗೌರವಪೂರ್ವಕವಾಗಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಸೂಚನೆಗಳನ್ನು ನೀಡಿದೆ. ಇಷ್ಟಾದರೂ ಸಹಿತ
ತಾಲೂಕಿನ ಬೆಳಕೆ ಪಂಚಾಯಿತಿಯಲ್ಲಿ ಬಣ್ಣ ಮಾಸಿದ ರಾಷ್ಟ್ರಧ್ವಜವನ್ನು ಹಾರಿಸಿ ಅವಮಾನ ಎಸಗಿರುವ ಘಟನೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬಗ್ಗೆ ಸದ್ಯ ಸಾರ್ವಜನಿಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ‌.

ಬೆಳಕೆ ಪಂಚಾಯಿತಿ ತಾಲೂಕಿನಲ್ಲಿ ವಿಸ್ತೀರ್ಣದಲ್ಲಿಯೇ ದೊಡ್ಡ ಪಂಚಾಯಿತಿಯಾಗಿದೆ. ಆದರೆ ಅಧಿಕಾರಿಗಳು ಮಾತ್ರ ಸಾಮಾನ್ಯ ಜ್ಞಾನವಿಲ್ಲದಂತೆ ಕಾರ್ಯ ಮಾಡುತ್ತಿರುವುದು ಸದ್ಯ ಗ್ರಾಮದ ಜನರಲ್ಲಿ ಅಸಮಾಧಾನ ಉಂಟುಮಾಡಿದೆ.‌

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಳಕೆ ಗ್ರಾಮ ಪಂಚಾಯತಿಯ ಪಿಡಿಓ ಸಹಿತ ಉಳಿದ ಸಿಬ್ಬಂದಿಗಳ ಬೇಜವಾಬ್ದಾರಿ ತನದಿಂದಾಗಿ ಬಣ್ಣ ಮಾಸಿದ ರಾಷ್ಟ್ರದ್ವಜವನ್ನು  ಹಲವು ದಿನಗಳಿಂದ ಹಾರಿಸಿ ರಾಷ್ಟ್ರದ್ವಜಕ್ಕೆ ಅವಮಾನ ಎಸಗಲಾಗಿದೆ ಎಂಬ ಮಾಹಿತಿ ತಾಲೂಕಿನಾದ್ಯಂತ ಸದ್ದು ಮಾಡಿದೆ.

ಪಂಚಾಯಿತಿಯ ರಾಷ್ಟ್ರಧ್ವಜವನ್ನು ಒಮ್ಮೆಲೆ ನೋಡಿದರೆ ಸಂಪೂರ್ಣ ಬಣ್ಣ ಮಾಸಿರುವುದು ಕಂಡು ಬರುತ್ತದೆ. ಇಷ್ಟೆಲ್ಲದರ ನಡುವೆ ಪಂಚಾಯಿತಿ ಪಿಡಿಓ ಹಾಗೂ ಸಿಬ್ಬಂದಿಗಳು ಗೊತ್ತಿದ್ದು ಸಹ ಬಣ್ಣ ಮಾಸಿದ ರಾಷ್ಟ್ರಧ್ವಜ ಹಾರಿಸುತ್ತಿರುವುದು ಮಾತ್ರ ಅಕ್ಷಮ್ಯ ಅಪರಾಧ.

ಈ ಬಗ್ಗೆ ಪಂಚಾಯಿತಿ ಪಿಡಿಒ ಚಂದ್ರಶೇಖರರನ್ನು ಪ್ರಶ್ನಿಸಿದಾಗ, ಹೊಸ ಬಾವುಟ ಖರೀದಿಸಿ ಒಂದು ವಾರ ಕಳೆದಿದೆ. ಬದಲಾಯಿಸಲು ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂಬ ಉಢಾಫೆಯ ಉತ್ತರವನ್ನು ನೀಡಿ ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟಾರೆ ಬಣ್ಣ ಮಾಸಿದ ರಾಷ್ಟ್ರ ಧ್ವಜ ಹಾರಿಸಿರುವುದರ ಜೊತೆಗೆ ಹೊಸ ರಾಷ್ಟ್ರ ಧ್ವಜವನ್ನು ಖರೀದಿಸಿ ಅದನ್ನು ಹಾರಿಸಲು ಪಂಚಾಯಿತಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಇವರ ಈ ನಡೆಗೆ ತಾಲೂಕಾಡಳಿತ ಅಥವಾ ಜಿಲ್ಲಾಡಳಿತ ಇಂತಹ ಅಧಿಕಾರಿಗಳ ದುರ್ನಡತೆಯ ವರ್ತನೆಗೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.