ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ತಲೆಕೆಡಿಸಿಕೊಂಡಿಲ್ಲ – ಸಿಎಂ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಗೆ ಪ್ರತಿಯಾಗಿ ಜನಸಂಕಲ್ಪ ಯಾತ್ರೆ ಕೈಗೊಂಡಿಲ್ಲ, ಈ ಸಮಾವೇಶಗಳ ಮೂಲಕ ಪ್ರತಿಪಕ್ಷಗಳಿಗೆ ಸಂದೇಶ ನೀಡಬೇಕಾದ ಅಗತ್ಯವಿಲ್ಲ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಜನಸಂಕಲ್ಪ ಯಾತ್ರೆಗೆ ತೆರಳುವ ಮುನ್ನ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಭಾರತ್ ಜೋಡೋ ಯಾತ್ರೆ ಬಗ್ಗೆ ಬಿಜೆಪಿ ತಲೆಕೆಡಿಸಿಕೊಂಡಿಲ್ಲ ಎಂದರು.

ರಾಜ್ಯ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಏನೆಲ್ಲ ಸಾಧನೆ ಮಾಡಿದೆ ಎಂದು ಜನರಿಗೆ ತಿಳಿಸುವುದು, ಮುಂದೆ ಜಾರಿಗೆ ತರಲಿರುವ ಕಾರ್ಯಕ್ರಮಗಳ ಸದ್ಬಳಕೆ ಕುರಿತು ಮಾಹಿತಿ ನೀಡಿ ಜನರ ವಿಶ್ವಾಸ ಗಳಿಕೊಳ್ಳುವುದು ಪ್ರವಾಸದ ಉದ್ದೇಶ ಎಂದು ಸಿಎಂ ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಗೆಲ್ಲಿಸಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿಸಲಾಗುವುದು. ಸಮಾವೇಶದ ಸ್ವರೂಪವನ್ನು ಆಯಾ ಜಿಲ್ಲೆಯ ಸ್ಥಳೀಯ ಘಟಕಗಳು ನಿರ್ಧರಿಸುತ್ತವೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಇನ್ನು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ರಕ್ಷಣೆಗೆ ಸರ್ಕಾರ ಬದ್ಧವಿದೆ. ಎಸ್​ಸಿ, ಎಸ್​ಟಿ ಮೀಸಲು ಹೆಚ್ಚಳವನ್ನು ಹಿಂದುಳಿದ ವರ್ಗಗಳ ಆಯೋಗ, ತಜ್ಞರ ಸಮಿತಿ ಅವಲೋಕಿಸಿದೆ. ಆಯೋಗ ಮತ್ತು ತಜ್ಞರು ನೀಡಲಿರುವ ವರದಿ ಆಧರಿಸಿ ಕ್ರಮ ವಹಿಸಲಾಗುವುದು. ಎಲ್ಲ ಸಮುದಾಯಗಳು ಮೀಸಲು ಪ್ರಮಾಣ ಹೆಚ್ಚಾಗಬೇಕು ಎಂಬ ಆಕಾಂಕ್ಷೆ ಹೊಂದಿರುವುದು ಸಹಜ. ಎಲ್ಲ ಮನವಿಗಳನ್ನು ಸಮಾನವಾಗಿ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಸಿಎಂ ಬೊಮ್ಮಾಯಿ‌ ಭರವಸೆ ನೀಡಿದರು.