ಹಬ್ಬದ ಬಳಿಕ ಒತ್ತುವರಿದಾರರಿಗೆ ಮತ್ತೆ ಶಾಕ್ ನೀಡಿದ ಬಿಬಿಎಂಪಿ.! ರಾಜಧಾನಿಯಲ್ಲಿ ಮತ್ತೆ ಜೆಸಿಬಿ ಗರ್ಜನೆ.?

ಬೆಂಗಳೂರು: ದಸರಾ ಹಬ್ಬ ಮುಗಿಯುತ್ತಿದ್ದಂತೆ ಒತ್ತುವರಿದಾರರಿಗೆ ಬಿಬಿಎಂಪಿ ಮತ್ತೆ ಶಾಕ್ ನೀಡಿದೆ. ರಾಜಧಾನಿಯಲ್ಲಿ ಮತ್ತೆ ಆಪರೇಷನ್ ಒತ್ತುವರಿ ತೆರವು ಇಂದಿನಿಂದ ಆರಂಭವಾಗಲಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡ ಜಾಗವನ್ನು ವಶಕ್ಕೆ ಪಡೆಯಲು ಬಿಬಿಎಂಪಿ ಭರ್ಜರಿ ತಯಾರಿ ನಡೆಸಿದ್ದು, ಪ್ರತಿಷ್ಠಿತ ಕಂಪನಿಗಳಿಗೆ ನಡುಕ ಶುರುವಾಗಿದೆ.

ಕಳೆದ ತಿಂಗಳು ನಗರದಲ್ಲಿ ಜೆಸಿಬಿ ಘರ್ಜನೆ ಸದ್ದು ಮಾಡಿತ್ತು. ಮಳೆಯ ಪರಿಣಾಮ ಮುಳುಗಡೆಯಾದ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮಾಡಲಾಗಿತ್ತು. ಆದರೆ ಕೆಲವರು ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಕೋರ್ಟ್ ಪ್ರಕರಣ ಇತ್ಯರ್ಥ ಮಾಡಿದ್ದು, ಜಂಟಿ ಸರ್ವೇ ನಡೆಸಿ ಡೆಮಾಲಿಷನ್ ಪ್ರಕ್ರಿಯೆ ನಡೆಸುವಂತೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆಗೆ ಸೂಚನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಇಂದಿನಿಂದ ತೆರವು ಕಾರ್ಯಚರಣೆ ನಡೆಯಲಿದೆ.

ಇದೇ ವೇಳೆ ಬೊಮ್ಮನಹಳ್ಳಿ, ಮಹದೇವಪುರ, ನೆಲಮಂಗಲ, ಯಲಹಂಕ ಸೇರಿದಂತೆ ಪಾಲಿಕೆ ವಿವಿಧ ವಲಯಗಳಲ್ಲಿ ಹಲವಾರು ಸ್ವತ್ತುಗಳ ತೆರವು ಕಾರ್ಯ ನಡೆಯಬೇಕಿದೆ. ಸರ್ವೇಯರ್ ಕೊರತೆ, ಮಾಲೀಕರ ಧಾವೆ ಸೇರಿದಂತೆ ಕಾರಣಾಂತರಗಳಿಂದ ಕಾಲುವೆ ಒತ್ತುವರಿ ತೆರವು ಕಾರ್ಯ ವಿಳಂಬವಾಗಿತ್ತು. ಇದೀಗ ಮತ್ತೆ ಬುಲ್ಡೋಜರ್ ಆಪರೇಷನ್ ನಡೆಯಲಿದ್ದು, ಬಾಗ್ಮನೆ ಟೆಕ್ ಪಾರ್ಕ್, ನಲಪಾಡ್ ಅಕಾಡೆಮಿ, ದಿವ್ಯಶ್ರೀ, ಪೂರ್ವಾಪಾರ್ಕ್ ರಿಡ್ಜ್ ಸೇರಿದಂತೆ 10 ಹೆಚ್ಚು ಸ್ವತ್ತುಗಳ ಜಂಟಿ ಸರ್ವೇ ಕಾರ್ಯ ನಡೆದಿದೆ.