ಬೆಂಗಳೂರು: ಸರ್ಕಾರೀ ಆದೇಶಗಳನ್ನು ಗಾಳಿಗೆ ತೂರಿರುವ ಆಪ್ ಆಧಾರಿತ ಟ್ಯಾಕ್ಸಿ ಕಂಪೆನಿಗಳಿಗೆ ಇಲಾಖೆ ಶಾಕ್ ನೀಡಿದೆ. ಸರ್ಕಾರದ ನೋಟಿಸ್ ಗೆ ಕ್ಯಾರೇ ಎನ್ನದ ಓಲಾ, ಊಬರ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಅನಧಿಕೃತ ಆಟೋ ರಿಕ್ಷಾಗಳಿಗೆ ಕಡಿವಾಣ ಹೇರಲು ಸಾರಿಗೆ ಇಲಾಖೆ ಪ್ಲ್ಯಾನ್ ಮಾಡಿದೆ. ಸಾರಿಗೆ ಇಲಾಖೆ ವಾರ್ನಿಂಗ್ ನಡುವೆಯೂ ಸೇವೆ ನೀಡುತ್ತಿರುವ ಆಟೋ ರಿಕ್ಷಾ ಇಂದೇ ಸೀಜ್ ಆಗುವ ಸಾಧ್ಯತೆ ಇದೆ. ಇದರಿಂದಾಗಿ ಬೆಂಗಳೂರು ನಗರದಲ್ಲಿ ಇಂದಿನಿಂದ ಓಲಾ, ಊಬರ್ ಹಾಗೂ ರಾಪಿಡೋ ಆಟೋರಿಕ್ಷಾ ಸೇವೆ ಕಂಪ್ಲೀಟ್ ಬಂದ್ ಆಗುವ ಸಾಧ್ಯತೆ ಇದೆ.
ಸಾರಿಗೆ ಇಲಾಖೆ ವಾರ್ನಿಂಗ್ ಬೆನ್ನಲ್ಲೇ ಆಟೋ ಚಾಲಕರಿಗೆ ಕೂಡಾ ಆತಂಕ ಶುರುವಾಗಿದೆ. ಆಪ್ ಆಧಾರಿತ ಆಟೋ ಹಾಗೂ ಬೈಕ್ ಟ್ಯಾಕ್ಸಿ ನಿಲ್ಲಿಸುವಂತೆ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ನೋಟಿಸ್ ನೀಡಿದೆ. ಸರ್ಕಾರದ ಕಟ್ಟುನಿಟ್ಟಿನ ಸೂಚನೆ ನಡುವೆ ಬೆಂಗಳೂರಿನಲ್ಲಿ ಒಲಾ, ಓಬರ್ ಹಾಗೂ ರಾಪಿಡೋ ಸೇವೆ ನೀಡುತ್ತಿರುವುದು ಗಮನಕ್ಕೆ ಬಂದಿರುವ ಕಾರಣ ಇವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಇನ್ನು ಓಲಾ, ಊಬರ್, ರಾಪಿಡೋ ಗೆ ನೋಟಿಸ್ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಹುತೇಕ ಆಟೋ ಚಾಲಕರು ಸಾರ್ವಜನಿಕರಿಂದ ಹೆಚ್ಚು ಸುಲಿಗೆ ಮಾಡುತ್ತಿರುವ ಸಂಗತಿ ಬಯಲಾಗಿದೆ. ಸದ್ಯ ನಗರದಲ್ಲಿ ಹೆಚ್ಚಿನ ಆಟೋ ಚಾಲಕರು ಮೀಟರ್ ಹಾಕುತ್ತಿಲ್ಲ. ಸರ್ಕಾರ ನಿಗದಿ ಪಡಿಸಿರುವ ದರ ಕನಿಷ್ಠ ದರ.30 ಆ ಬಳಿಕ ಪ್ರತಿ ಕಿ.ಮೀ .15 ಇದೆ. ಆದರೆ, ಚಾಲಕರು ಕನಿಷ್ಠ 2 ಕಿ.ಮೀ ದೂರಕ್ಕೆ 60 ರಿಂದ 70, 2 ರಿಂದ 3 ಕಿ.ಮೀ. ದೂರಕ್ಕೆ 100, ಐದು ಕಿ.ಮೀಗಿಂತ ಹೆಚ್ಚಿನ ದೂರಕ್ಕೆ 120 ರಿಂದ 150 ರೂ ಕೇಳುತ್ತಿದ್ದಾರೆ.
ಇನ್ನು ಬಡಾವಣೆಗಳಿಂದ ನಗರದ ಮಾರುಕಟ್ಟೆ, ಬಸ್, ರೈಲ್ವೆ ನಿಲ್ದಾಣ ಹಾಗೂ ಕೇಂದ್ರಗಳಿಗೆ ತೆರಳಬೇಕು ಎಂದರೆ ಮೀಟರ್‌ಗಿಂತ ಮೂರು ಪಟ್ಟು ದರ ನೀಡಲೇಬೇಕಾಗಿದೆ. ಓಲಾ, ಊಬರ್‌ನಂತಹ ಆಯಪ್‌ಗಳು ಮಾತ್ರವಲ್ಲದೇ ಬಹುತೇಕ ಆಟೋರಿಕ್ಷಾಗಳು ಪ್ರಯಾಣಿಕರ ಸುಲಿಗೆಗೆ ನಿಂತಿದ್ದು, ಸಾರ್ವಜನಿಕರು ಬೇಸತ್ತಿದ್ದಾರೆ. ಸರ್ಕಾರದ ನೋಟಿಸ್ ಗೆ ಪ್ರತಿಕ್ರಿಯೆ ನೀಡದ ಹಿನ್ನೆಲೆ ಆ್ಯಪ್ ಮೂಲಕ ವ್ಯವಹಾರ ಮಾಡುವ ಆಟೋಗಳನ್ನ ಜಪ್ತಿ ಮಾಡುವ ಸಾಧ್ಯತೆ ಇದೆ.
ಆ್ಯಪ್ ಗಳ ಜೊತೆಗಿನ ಸಂಬಂಧವನ್ನ ಕಡಿತಗೊಳಿಸಲು ಆಟೋ ಚಾಲಕರು ಚಿಂತನೆ ನಡೆಸಿದ್ದು, ಆ್ಯಪ್ ನಡೆಸುತ್ತಿರುವ ಕಂಪನಿಗಳ ವಿರುದ್ದ ಕ್ರಮ ಕೈಗೊಳ್ಳದೇ, ಆಟೋ ಜಪ್ತಿ ಮಾಡುತ್ತೇವೆ ಎಂಬುದು ಖಂಡನೀಯ ಎಂದು ಆಟೋ ಚಾಲಕರು ಹಾಗೂ ಯೂನಿಯನ್ ಗಳು ಆಕ್ರೋಶ ಹೊರ ಹಾಕಿದ್ದಾರೆ.