5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆಯ ನಿರ್ಧಾರ ಅವೈಜ್ನಾನಿಕ – ಲೋಕೇಶ್ ತಾಳಿಕಟ್ಟೆ

ಬೆಂಗಳೂರು: 5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆಯ ನಿರ್ಧಾರ ಅವೈಜ್ನಾನಿಕ. ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಮುಂಚೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖಂಡರ ಜೊತೆ ಚರ್ಚಿಸಿದರೆ ಒಳಿತು ಎಂದು ರುಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಗೆ ಪತ್ರ ಬರೆದಿದ್ದಾರೆ.

2009 ರ ಆರ್ ಟಿ ಇ ಕಾಯ್ದೆಯ ಷರತ್ತು 16 ರಲ್ಲಿ 1-8 ನೇ ತರಗತಿಯ ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡಬಾರದಂದು ಉಲ್ಲೇಖಿಸಲಾಗಿದೆ. ಅದಕ್ಕೆ ಪೂರಕ ಎಂಬಂತೆ ಕಳೆದ ಹತ್ತಾರು ವರ್ಷದಿಂದ ನಿರಂತರ ಮತ್ತು ಸಮಗ್ರ ಮೌಲ್ಯಾಂಕನ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ.

ಪ್ರತಿ ವರ್ಷವೂ 4 ಬಾರಿ ರೂಪಣಾತ್ಮಕ ಮೌಲ್ಯಾಂಕನ ಪರೀಕ್ಷೆಗಳು ಹಾಗೂ 2 ಬಾರಿ ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆಗಳನ್ನು ಒಳಗೊಂಡು ವರ್ಷಕ್ಕೆ ಒಟ್ಟು 6 ಪರೀಕ್ಷೆಗಳನ್ನು ಬರೆಯುತ್ತಾರೆ. ಇಷ್ಟಲ್ಲದೇ ಈಗ ಬೋರ್ಡ್ ಪರೀಕ್ಷೆಯನ್ನು ಮಕ್ಕಳಿಗೆ ನಡೆಸಿದರೆ ಮಕ್ಕಳ ಮನಸ್ಸಿನಲ್ಲಿ ಬಾರಿ ಒತ್ತಡವನ್ನು ಉಂಟುಮಾಡುತ್ತದೆ.

1 ರಿಂದ 8 ನೇ ತರಗತಿವರೆಗೆ ಫೇಲ್ ಮಾಡುವ ಹಾಗಿಲ್ಲ ಎಂದರೆ ಪರೀಕ್ಷೆ ನಡೆಸುವುದು ಏಕೆ?. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಈ ವರ್ಷದ ವರದಿಯಲ್ಲಿ ಕರ್ನಾಟಕದ ಸರ್ಕಾರಿ ಶಾಲೆಯಲ್ಲಿ ಓದುವಂತಹ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ತುಂಬಾ ಕಳಪೆ ಆಗಿದೆ ಎಂಬ ಕಾರಣ ನೀಡಿದೆ.

ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿ ಮಾಡಬೇಕೆಂದರೆ ಶಿಕ್ಷಕರ ನೇಮಕಾತಿ, ಸಂಪನ್ಮೂಲಗಳನ್ನು ಒದಗಿಸುವುದು, ಶಿಕ್ಷಕರಿಗೆ ತರಬೇತಿ, ಇರುವ ಶಿಕ್ಷಕರನ್ನು ಆಧುನಿಕ ರೀತಿಯಲ್ಲಿ ತರಬೇತಿಗೊಳಿಸಿ ನಿರಂತರವಾಗಿ ಪಾಠ ಮಾಡುವಲ್ಲಿ ತೊಡಗಿಸಿಕೊಳ್ಳುವುದು, ಪ್ರತ್ಯೇಕ ಲ್ಯಾಬ್ ಗಳು, ಸುಸ್ಥಿರ ಮತ್ತು ಆಕರ್ಷಕ ಕೊಠಡಿಗಳು, ಸರಿಯಾದ ಸಮಯದಲ್ಲಿ ಪುಸ್ತಕಗಳ ವಿತರಣೆ, ಇತ್ಯಾದಿ ಪರಿಕರಗಳನ್ನು ಸರಿಯಾಗಿ ಒದಗಿಸಬೇಕು.

ಈ ಮೇಲಿನ ವ್ಯವಸ್ಥೆಗಳನ್ನು ಮಾಡದೆ, ಕೇವಲ ಪರೀಕ್ಷೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚುತ್ತದೆ ಎಂಬುದು ಅವೈಜ್ಞಾನಿಕ ಹಾಗೂ ಹಾಸ್ಯಾಸ್ಪದವಾಗಿದೆ. ಸರ್ಕಾರದ ಈ ನಿರ್ಧಾರವನ್ನು ಜಾರಿಗೊಳಿಸುವ ಮೊದಲು ಖಾಸಗಿ ಸಂಸ್ಥೆಗಳ ಜೊತೆಗೆ ಸಭೆ ನಡೆಸಿ, ಸಮಗ್ರವಾಗಿ ಸರ್ಚಿಸಬೇಕು ಎಂದು ಲೋಕೇಶ್ ತಾಳಿಕಟ್ಟೆ ಸಚಿವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.