ದೇವನಹಳ್ಳಿ: ವಿದೇಶದಿಂದ ಅಕ್ರಮವಾಗಿ ಕೊರಿಯರ್ ಮೂಲಕ ಸಾಗಾಟ ಮಾಡ್ತಿದ್ದ ಎಂಡಿಎಂಎ ಡ್ರಗ್ಸ್ ಅನ್ನು ಏರ್ಪೋಟ್ ನ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳೆದ 3 ನೇ ತಾರೀಕು ಬೆಲ್ಜಿಯಂನಿಂದ ಪಾರ್ಸಲ್ ಒಂದು ಬಂದಿತ್ತು. ಆದರೆ ಪಾರ್ಸಲ್ ಮೇಲೆ ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಕೊರಿಯರ್ ನಲ್ಲಿ ನಿಷೇದಿತ ಎಂಡಿಎಂಎ ಡ್ರಗ್ಸ್ ಇರೋದು ಪತ್ತೆಯಾಗಿದ್ದು ಪಾರ್ಸಲ್ ಬಂದ ಬಗ್ಗೆ ಪಾರ್ಸಲ್ ಮೇಲಿದ್ದ ವಿಳಾಸಕ್ಕೆ ಸಂದೇಶ ರವಾನಿಸಿ ಪಡೆದುಕೊಳ್ಳಲು ಬರುವವರಿಗಾಗಿ ಅಧಿಕಾರಿಗಳು ಕಾದು ಕುಳಿತಿದ್ದರು. ಅದರಂತ ನಿನ್ನೆ ಸಂಜೆ ಪಾರ್ಸಲ್ ತೆಗೆದುಕೊಳ್ಳಲು ಒರ್ವ ಮಹಿಳೆ ಏರ್ಪೋಟ್ ಕಾರ್ಗೋಗೆ ಆಗಮಿಸಿ ಪಾರ್ಸಲ್ ತೆಗೆದುಕೊಳ್ಳಲು ಮುಂದಾಗಿದ್ದು ಅಧಿಕಾರಿಗಳು ಆಕೆಯನ್ನ ಪಾರ್ಸಲ್ ಬಗ್ಗೆ ಪ್ರಶ್ನಿಸಿದ್ರು. ಈ ವೇಳೆ ಮಹಿಳೆ ಅಧಿಕಾರಿಗಳ ಕಣ್ತಪ್ಪಿಸಿ ಎಸ್ಕೇಪ್ ಆಗಲು ಯತ್ನಿಸಿದ್ದು ಮಹಿಳೆಯ ವಾಹನವನ್ನ ಚೇಸ್ ಮಾಡಿ ಆಕೆಯನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಡ್ರಗ್ಸ್ ಪಡೆಯಲು ಬಂದಿದ್ದ ಮಹಿಳೆ ಬೆಂಗಳೂರಿನ ವೈಟ್ ಪೀಲ್ಡ್ ನಲ್ಲಿನ ಅಂತರಾಷ್ಟ್ರೀಯ ಶಾಲೆಯಲ್ಲಿ ಸ್ವಿಮ್ಮಿಂಗ್ ಕೋಚರ್ ಆಗಿ ಕೆಲಸ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ. ಶಾಲಾ ಕಾಲೇಜುಗಳ ಪ್ರತಿಷ್ಠಿತ ಶ್ರೀಮಂತರ ಮಕ್ಕಳಿಗೆ ಡ್ರಗ್ಸ್ ನೀಡಲು ವಿದೇಶದಿಂದ ಪಾರ್ಸಲ್ ತರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಕೊರಿಯರ್ ನಲ್ಲಿದ್ದ 76 ಲಕ್ಷ ಮೌಲ್ಯದ 2 ಕೆಜಿ 5080 ಎಂಎಡಿಎಂಎ ಡ್ರಗ್ಸ್ ಅನ್ನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಮಹಿಳೆಯನ್ನ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.