ದೆಹಲಿ: ಇಂಡೋಸ್ಪಿರಿಟ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹೇಂದ್ರು ಅವರನ್ನು ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ. ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಲ್ಲಿ ಮಹೇಂದ್ರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಕೇಂದ್ರೀಯ ತನಿಖಾದಳ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿತ್ತು. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಸಮೀರ್ ಬಂಧನವಾಗಿದೆ ಎಂದು ಇಡಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದ ಈವೆಂಟ್ಸ್ ಕಂಪನಿ ಓನ್ಲಿ ಮಚ್ ಲೌಡರ್ ಮಾಜಿ ಸಿಇಒ ವಿಜಯ್ ನಾಯರ್ ಅವರನ್ನು ಅಬಕಾರಿ ನೀತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಬಂಧಿಸಿದ ಒಂದು ದಿನದ ನಂತರ ಮಹೇಂದ್ರು ಅವರ ಬಂಧನವಾಗಿದೆ. ಅರ್ಜುನ್ ಪಾಂಡೆ ಎಂಬ ವ್ಯಕ್ತಿ ವಿಜಯ್ ನಾಯರ್ ಪರವಾಗಿ ಮಹೇಂದ್ರು ಅವರಿಂದ ಸುಮಾರು 2 ರಿಂದ 4 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾನೆ ಎಂದು ಸಿಬಿಐ ಪ್ರಥಮ ಮಾಹಿತಿ ವರದಿ ತಿಳಿಸಿದೆ.