ಅಯೋಧ್ಯೆಯ ಚೌಕಕ್ಕೆ ಗಾನ ಕೋಗಿಲೆ ಲತಾ ಮಂಗೇಶ್ಕರ್ ಹೆಸರು ನಾಮಕರಣ.! ಪ್ರಧಾನಿ ಮೋದಿಯಿಂದ ಉದ್ಘಾಟನೆ.!

ಉತ್ತರಪ್ರದೇಶ: ಅಯೋಧ್ಯೆಯಲ್ಲಿ ಇಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹೆಸರಿನ ವೃತ್ತವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಇಂದು ಅವರ 93 ನೇ ಹುಟ್ಟುಹಬ್ಬದ ಪ್ರಯುಕ್ತ ಲತಾ ಮಂಗೇಶ್ಕರ್ ಚೌಕ್ ಹೆಸರಿನ ವೃತ್ತವನ್ನು ವರ್ಚುವಲ್ ಮೂಲಕ ಪ್ರಧಾನಿ ಉದ್ಘಾಟಿಸಲಿದ್ದಾರೆ.

ಚಿತ್ರರಂಗಕ್ಕೆ ಲತಾಜೀ ನೀಡಿದ ಕೊಡುಗೆ ಅಪಾರವಾಗಿದ್ದು, ಬಾಲಿವುಡ್​ ಸೆಲೆಬ್ರಿಟಿಗಳು, ಗಣ್ಯರು, ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಮೂಲಕ ಮಹಾನ್​ ಗಾಯಕಿಯ ಜನ್ಮದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ. ಲಕ್ಷಾಂತರ ಗಾಯಕರಿಗೆ ಲತಾ ಮಂಗೇಶ್ಕರ್​ ಸ್ಫೂರ್ತಿಯಾಗಿದ್ದು, ಅವರಂತೆಯೇ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಾರೆ. ಅಭಿಮಾನಿಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಲತಾ ಮಂಗೇಶ್ಕರ್ ಜನ್ಮದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಲತಾ ದೀದಿ ಅವರ ಜನ್ಮದಿನದಂದು ಅಯೋಧ್ಯೆಯ ಚೌಕ್‌ಗೆ ಅವರ ಹೆಸರಿಡಲಾಗುವುದು. ಇದು ಭಾರತದ ಶ್ರೇಷ್ಠ ಐಕಾನ್‌ಗಳಲ್ಲಿ ಒಬ್ಬರಿಗೆ ಸೂಕ್ತವಾದ ಗೌರವವಾಗಿದೆ ಎಂದು ಹೇಳಿದ್ದಾರೆ.

ಚೌಕದಲ್ಲಿ 14 ಟನ್ ತೂಕದ 40 ಅಡಿ ಉದ್ದ, 12 ಮೀ.​ ಎತ್ತರದ ಬೃಹತ್​ ವೀಣೆಯನ್ನು ನಿರ್ಮಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಚೌಕ್ ಅನ್ನು ಉದ್ಘಾಟಿಸಲಿದ್ದು, ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣ ಮಾಡಲಿದ್ದಾರೆ.