ಶಿವಮೊಗ್ಗ: ಭಗತಸಿಂಗ್ ಆತ್ಮಕ್ಕೆ ಶಾಂತಿ ಸಿಗುವ ನಿಟ್ಟಿನಲ್ಲಿ ಇಂದು ಪಿಎಫ್ ಐ ನಿಷೇಧವಾಗಿದೆ. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಪಿಎಫ್ ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿತ್ತು. ವಿದೇಶದಿಂದ ಫಂಡಿಂಗ್ ಆಗುತ್ತಿತ್ತು. ಹಿಂದೂ ಯುವಕರ ಕೊಲೆ ನಡೆಯುತ್ತಿತ್ತು. ಆದರೆ ಈಗ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ. ಕ್ರಾಂತಿಕಾರಿ ನಾಯಕ ಅಮಿತ್ ಶಾ ಸರಿಯಾಗಿ ಬಿಸಿ ಕೊಟ್ಟಿದ್ದಾರೆ. ರಾಷ್ಟ್ರದ್ರೋಹವನ್ನು ಅಮಿತ್ ಶಾ ಎಂದಿಗೂ ಸಹಿಸುವುದಿಲ್ಲ ಎಂದರು.
ಈ ವಿಚಾರದಲ್ಲಿ ರಾಜಕೀಯ ಬರಬಾರದು. ನಿಮ್ಮದೇ ಸರ್ಕಾರ ಕೇಂದ್ರದಲ್ಲಿದೆ ಪಿಎಫ್ ಐ ಬ್ಯಾನ್ ಮಾಡಿ ಅಂತ ಅಧಿವೇಶನದಲ್ಲಿ ಸಿದ್ದರಾಮಯ್ಯ ಕೂಡಾ ಒತ್ತಾಯ ಮಾಡಿದ್ದರು. ರಾಜ್ಯದಲ್ಲಿ ದಾಖಲೆ ಸಂಗ್ರಹ ಮಾಡಿದ್ದೆವು. ಎಲ್ಲ ರಾಜ್ಯಗಳಿಂದ ಸಾಕ್ಷ್ಯ ಸಂಗ್ರಹಿಸಿ ಸಂಘಟನೆಯನ್ನು ಬ್ಯಾನ್ ಮಾಡಿದ್ದಾರೆ ಎಂದರು.
ಇನ್ನು ಹರ್ಷ ಕೊಲೆ, ಪ್ರೇಮಸಿಂಗ್ ಚೂರಿ ಇರಿತ ಪ್ರಕರಣ ಶಿವಮೊಗ್ಗದಲ್ಲಿ ನಡೆದಿತ್ತು. ಪ್ರಕರಣದ ತನಿಖೆಯಲ್ಲಿ ರಾಷ್ಟ್ರದ್ರೋಹಿಗಳ ಸಂಪರ್ಕಿರುವುದು ಪತ್ತೆಯಾಗಿತ್ತು. ರಾಷ್ಟ್ರದ್ರೋಹಿಗಳಿಗೆ ಭಾರತದಲ್ಲಿ ಅವಕಾಶ ಇಲ್ಲ. ಮುಸಲ್ಮಾನರು ಶಾಂತಿ ಬಯಸುತ್ತಾರೆ. ಆದರೆ ಕೆಲವರು ಅಶಾಂತಿ ಸೃಷ್ಟಿಸುತ್ತಿದ್ದಾರೆ. ಅವರ ಮನಸ್ಥಿತಿ ಬದಲಾಗದಿದ್ದರೆ ಅಶಾಂತಿ ಮುಂದುವರಿಯುತ್ತೆ ಎಂದು ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.