ಬೆಂಗಳೂರು: ಪಿಎಫ್ಐ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳು ಪಿಎಫ್ಐ ಬ್ಯಾನ್ ಯಾವಾಗ ಎಂದು ಪ್ರಶ್ನಿಸುತ್ತಿದ್ದರು. ಈ ಪ್ರಶ್ನೆಗೆ ಇದೀಗ ಕೇಂದ್ರ ಸರ್ಕಾರ ದಿಟ್ಟ ಉತ್ತರ ನೀಡಿದೆ. ಪಿಎಫ್ಐ ನಿಷೇಧಿಸುವಂತೆ ವಿರೋಧ ಪಕ್ಷದವರೂ ಸೇರಿದಂತೆ ಎಲ್ಲರೂ ಮನವಿ ಮಾಡಿದ್ದೆವು. ಹಲವು ಉಗ್ರಗಾಮಿ ಸಂಘಟನೆಗಳಿಗೆ ಪಿಎಫ್ಐ ರಿಮೋಟ್ ಕಂಟ್ರೋಲ್ ಆಗಿತ್ತು. ಪಿಎಫ್ಐ ಕಾರ್ಯಕರ್ತರು ಹಲವು ಉಗ್ರಗಾಮಿ ಸಂಘಟನೆಗಳಲ್ಲಿ ತರಬೇತಿ ಪಡೆದು, ದುಷ್ಕೃತ್ಯ ನಡೆಸಲು ಮುಂದಾಗಿದ್ದರು. ಹಲವು ದೇಶದ್ರೋಹ ಚಟುವಟಿಕೆಗಳಲ್ಲಿಯೂ ಪಿಎಫ್ಐ ಭಾಗಿಯಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ನೀಡಿದ್ದು ಪಿಎಫ್ಐ ನಿಷೇಧವನ್ನು ಸ್ವಾಗತಿಸಿದ್ದಾರೆ. ದುಷ್ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಈ ಸಂಘಟನೆಗಳ ಬಗ್ಗೆ ಕೇಂದ್ರ ಸರ್ಕಾರವು ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ದೇಶದ ಏಕತೆ, ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮ ಎಂದು ಹೇಳಿದ್ದಾರೆ.