ಸರ್ಕಾರಿ ಆಸ್ಪತ್ರೆಗೆ ತೆರಳುವ ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರಿಂದ ಮನವಿ

ಭಟ್ಕಳ: ತಾಲೂಕಿನ ಸಾಗರ ರಸ್ತೆಯಿಂದ ಸರ್ಕಾರಿ ಆಸ್ಪತ್ರೆಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಸಾರ್ವಜನಿಕರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಭಟ್ಕಳ ತಾಲ್ಲೂಕಿನ ಪುರಸಭೆ ವ್ಯಾಪ್ತಿಯ ಸರಕಾರಿ ಆಸ್ಪತ್ರೆಯು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿ ಬೆಳೆಯುತ್ತಿದ್ದು, ಉತ್ತಮ ವೈದ್ಯರು, ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಎಲ್ಲಾ ಸೇವೆಗಳು ನೀಡುತ್ತಿರುವುದರಿಂದ ಪ್ರತಿನಿತ್ಯ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಆದರೆ ಈ ಆಸ್ಪತ್ರೆಗೆ ಸಾಗರ ರೋಡ ಕ್ರಾಸ್ ನಿಂದ ಮತ್ತು ಇತರೆ ಕಡೆಯಿಂದ ಆಸ್ಪತ್ರೆಗೆ ಬರುವ ರಸ್ತೆ ಸ್ಥಿತಿ ಮಾತ್ರ ಹೇಳತೀರದಾಗಿದೆ.

ಸಾಗರ ರಸ್ತೆಯಿಂದ ಬರುವ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಇತರೆ ಜನರು ಸಂಚರಿಸುತ್ತಾರೆ. ರಸ್ತೆಯು ಹೊಂಡಗಳಿಂದ ಕೂಡಿದ್ದು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಮತ್ತು ಅಂಬುಲೆನ್ಸ್ ಗಳು ಅತಿ ವೇಗದಿಂದ ಹೋಗಿಬರಲು ಕೂಡ ತೊಂದರೆಯಾಗುತ್ತಿದೆ. ಆದ್ದರಿಂದ ರಸ್ತೆ ಪರಿಶೀಲನೆ ಮಾಡಿ ದುರಸ್ತಿ ಕೈಗೊಳ್ಳುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ .

ನಂತರ ಈ ಬಗ್ಗೆ ಮಾತನಾಡಿದ ಆಟೋ ಚಾಲಕ ಗಣೇಶ ಹಳ್ಳೆರ್ ಸರ್ಕಾರಿ ಆಸ್ಪತ್ರೆಯ ಮುಂಬಾಗದ ರಸ್ತೆಯು ಯು.ಜಿ.ಡಿ ಕಾಮಗಾರಿಯಿಂದಾಗಿ ಬಹಳ ಹದಗೆತ್ತಿದೆ. ಪುರಸಭೆ ಅಧ್ಯಕ್ಷರು ತಮಗೆ ಬೇಕಾದ ಸ್ಥಳಗಳಲ್ಲಿ ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಿಕೊಂಡಿದ್ದಾರೆ. ಆದರೆ ಸಾರ್ವಜನಿಕರು, ರೋಗಿಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನ ನಿತ್ಯ ಓಡಾಡುವ ಈ ರಸ್ತೆ ಮತ್ತು ಯುಜಿಡಿ ಕಾಮಗಾರಿಯನ್ನು ಡೋಂಗಿ ರೀತಿಯಲ್ಲಿ ಮಾಡಿದ್ದಾರೆ. ಇದಕ್ಕೆ ನೇರ ಹೊಣೆಗಾರರು ಪುರಸಭೆ ಅಧ್ಯಕ್ಷರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಎಂದು ಆರೋಪ ಮಾಡಿದ್ದಾರೆ.

ನಂತರ ಇನ್ನೋರ್ವ ಆಟೋ ಚಾಲಕ ಶಂಕರ ನಾಯ್ಕ ಮಾತನಾಡಿ ಯುಜಿಡಿ ಕಾಮಗಾರಿಗೆಂದು ರಸ್ತೆಗಳನ್ನು  ಅಗೆದು ಹೊಂಡ ತೆಗೆದಿದ್ದಾರೆ ಹಾಗೂ ಅದರಲ್ಲಿ ಹಾಕಿದೆ ದೊಡ್ಡ ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ಸಂಚಾರ ಮಾಡುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಆಗಿದೆ. ಕಳೆದ ಕೆಲ ದಿನಗಳ ಹಿಂದೆ ಯುವತಿಯೋರ್ವಳು ನಡೆದುಕೊಂಡು ಹೋಗುವ ವೇಳೆ ಜಲ್ಲಿ ಕಲ್ಲಿನಿಂದ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೆ ಇಂತಹ ಅನಾಹುತ ಆಗುವ ಮುನ್ನ ರಸ್ತೆ ಕಾಮಗಾರಿಯನ್ನು  ಪೂರ್ಣಗೊಳಿಸಬೇಕು ಎಂದರು.

ಈ ವೇಳೆ ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪರಮೇಶ್ವರ ನಾಯ್ಕ ಕಂಡೆಕೋಡ್ಲು, ಗಣಪತಿ ನಾಯ್ಕ ಮುಟ್ಟಳ್ಳಿ, ಗಣೇಶ್ ಹಳ್ಳೇರ ಮುಂಡಳ್ಳಿ, ಶಂಕರ ನಾಯ್ಕ  ಕಡವಿನಕಟ್ಟಾ, ಮಾದೇವ ನಾಯ್ಕ ಮುಟ್ಟಳ್ಳಿ, ಸುರೇಶ ನಾಯ್ಕ ಗುಳ್ಮಿ, ಶನಿಯಾರ ಮೊಗೇರ ಬೆಳಕೆ, ರಾಜು ನಾಯ್ಕ ಮುಟ್ಟಳ್ಳಿ ಉಪಸ್ಥಿತರಿದ್ದರು.