ಭಟ್ಕಳ: ಸ್ವಚ್ಛತಾ ಅಭಿಯಾನದ ಅಂಗವಾಗಿ ಇಂಡಿಯಾ Vs ಗಾರ್ಬೇಜ್ ಕಾರ್ಯಕ್ರಮದ ಅಡಿಯಲ್ಲಿ ಇಂದು ಜೆಸಿಐ ಭಟ್ಕಳ ಸಿಟಿ ಹಾಗೂ ಪುರಸಭೆಯ ಸಹಭಾಗಿತ್ವದಲ್ಲಿ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜು ಮತ್ತು ಅಂಜುಮನ್ ಬಾಯ್ಸ್ ಸ್ಕೂಲ್ ವಿದ್ಯಾರ್ಥಿಗಳ ಜೊತೆಗೂಡಿ ಶ್ರೀ ಗುರು ಸುಧೀಂದ್ರ ಕಾಲೇಜ್ ಆವರಣದಿಂದ ಪುರಸಭೆ ಆವರಣದವರೆಗೆ ಜನಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳು ಅಣಕು ಪ್ರದರ್ಶನದ ಮೂಲಕ ಪ್ಲಾಸ್ಟಿಕ್ ಹಾಗೂ ಇತರ ಕಸಗಳಿಂದ ಉಂಟಾಗುವ ದುಷ್ಪರಿಣಾಮ ಮತ್ತು ಇದರಿಂದ ಪರಿಸರವನ್ನು ಸಂರಕ್ಷಿಸಿಕೊಳ್ಳುವ ಬಗ್ಗೆ ಜನಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ದಿ. ನ್ಯೂ ಇಂಗ್ಲಿಷ್ ಕಾಲೇಜ್ ಪ್ರಾಂಶುಪಾಲ ವೀರೇಂದ್ರ ಶಾನಭಾಗ ಮಾತನಾಡಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳ ಬಳಕೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಸಾಕ್ಷಿ ಸಮೇತ ವಿವರಣೆ ನೀಡಿ ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳುವ ಅಗತ್ಯತೆಯ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಜೆಸಿಐ ಭಟ್ಕಳ ಸಿಟಿಯ ಅಧ್ಯಕ್ಷ ಪಾಂಡುರಂಗ ನಾಯ್ಕ, ಪುರಸಭೆಯ ಆರೋಗ್ಯಾಧಿಕಾರಿ ಸೋಜಿಯಾ, ಜೆಸಿಐ ಎಸ್ ಎಮ್ ಎ ಚೇರ್ಮನ್ ಸೆನೆಟರ್ ಅಬ್ದುಲ್ ಜಬ್ಬರ್ ಸಾಹೇಬ್, ಜೆಸಿ ಭಟ್ಕಳ ಸಿಟಿಯ ನಿಕಟಪೂರ್ವ ಅಧ್ಯಕ್ಷರಾದ ಜೆಸಿ ಸುರೇಶ್ ಪೂಜಾರಿ, ಕಾರ್ಯದರ್ಶಿ ಜೆಸಿ ಮನೋಹರ್ ನಾಯ್ಕ, ಅಂಜುಮನ್ ಶಾಲೆಯ ಶಿಕ್ಷಕರಾದ ಅಬ್ದುಲ ವಾಫಿ, ಜಾಲಿ ಪಟ್ಟಣ ಪಂಚಾಯತ ಸದಸ್ಯೆ ಶಾಹಿನ ಶೇಕ್, ಜೆಸಿಐ ಭಟ್ಕಳ ಸಿಟಿಯ ಸದಸ್ಯರುಗಳು ಪುರಸಭೆಯ ಸಿಬ್ಬಂದಿಗಳು, ದಿ ನ್ಯೂ ಇಂಗ್ಲಿಷ್ ಕಾಲೇಜಿನ ಶಿಕ್ಷಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಾರ್ವಜನಿಕರು, ಹಾಜರಿದ್ದರು.