ಕುಮಟಾ: ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರ ಜೊತೆಗೆ ಆರೋಗ್ಯ ಸಚಿವರು ಮಂಗಳವಾರ ಬೆಳಗ್ಗೆ ಸಭೆ ನಡೆಸಿದ್ದರು. ಬಳಿಕ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದ್ದರು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕುಮಟಾಕ್ಕೆ ಭೇಟಿ ನೀಡಿ ಆಸ್ಪತ್ರೆ ನಿರ್ಮಾಣದ ಕುರಿತು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಬೆಳವಣಿಗೆ ನಡೆಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಲವು ಅಧಿಕಾರಿಗಳ ಜತೆ ಕುಮಟಾಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕುಮಟಾದ ಮಿರ್ಜಾನ, ರೈಲು ನಿಲ್ದಾಣ, ಕೊಂಕಣ ಎಜ್ಯುಕೇಷನ್ ಸಮೀಪದ ಜಾಗಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಯೊಂದಿಗೆ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆ ಅಧಿಕಾರಿಗಳೂ ಭಾಗಿಯಾಗಿದ್ದರು.
ಸ್ಥಳ ಪರಿಶೀಲನೆಯನ್ನು ಮಾಡಿದ ಬಳಿಕ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಆರೋಗ್ಯ, ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆಗೆ ಡಿಸಿ ಸಭೆ ನಡೆಸಿ ಆಸ್ಪತ್ರೆಗೆ ಬೇಕಾದ ಜಾಗದ ಬಗ್ಗೆ ಚರ್ಚಿಸಿದ್ದಾರೆ. ಕುಮಟಾದಲ್ಲಿ ಸ್ಥಳ ಪರಿಶೀಲನೆ ಮಾಡಿದ ಮತ್ತು ಸಾಧಕ-ಬಾಧಕಗಳ ಪಟ್ಟಿ ಸಹಿತ ಸರ್ಕಾರಕ್ಕೆ ವರದಿ ನೀಡಿ ಸ್ಥಳಗಳ ಬಗ್ಗೆ ಸ್ಥೂಲ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ಹೇಳಲಾಗಿದೆ.