ಯಲ್ಲಾಪುರ: ತಾಲೂಕಿನ ಬ್ಯಾಂಕ್ ಆಫ್ ಬರೋಡಾದ ಕೋಟಿ ಕೋಟಿ ಹಣವನ್ನ ತನ್ನ ಪತ್ನಿಯ ಖಾತೆಗೆ ವರ್ಗಾಯಿಸಿ ಪರಾರಿಯಾಗಿದ್ದ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಆಂಧ್ರ ಮೂಲದ ಕುಮಾರ ಕೃಷ್ಣಮೂರ್ತಿ ಬೋನಾಲ ಬಂಧಿತ ಆರೋಪಿ.
ಆರೋಪಿ ಕುಮಾರ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಮೋಹಕ್ಕೆ ಒಳಗಾಗಿದ್ದ. ಇದಕ್ಕಾಗಿ ತನ್ನ ಬ್ಯಾಂಕಿನ ಸಹದ್ಯೋಗಿಗಳ ಲಾಗಿನ್ ಐಡಿ ಬಳಸಿ ಎರಡುಕೋಟಿ ಎಪ್ಪತ್ತು ಲಕ್ಷ ವನ್ನು ಪತ್ನಿ ರೇವತಿಯ ಎಸ್.ಬಿ.ಐ ಖಾತೆಗೆ ವರ್ಗಾವಣೆ ಮಾಡಿ ಎಸ್ಕೇಪ್ ಆಗಿದ್ದ. ಯಲ್ಲಾಪುರ ಪೊಲೀಸರು ಆತನ ಟೆಕ್ನಿಕಲ್ ಡೇಟಾ ಹಾಗೂ ಇನ್ನಿತರ ಮಾಹಿತಿಯನ್ನು ಕಲೆಹಾಕಿ ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ.
ಬಂಧನದ ನಂತರ ಆರೋಪಿಯನ್ನು ವಿಚಾರಣೆ ಮಾಡಿ ಹಣದ ಬಗ್ಗೆ ಮಾಹಿತಿಯನ್ನು ಪೊಲೀಸರು ಕೇಳಿದ್ದಾರೆ. ಆಗ ಆತ ತಾನು ಬ್ಯಾಂಕ್ ನಿಂದ ತೆಗೆದ ಎರಡುಕೋಟಿ ಎಪ್ಪತ್ತು ಲಕ್ಷ ಹಣವನ್ನು ಕ್ರಿಕೇಟ್ ಬೆಟ್ಟಿಂಗ್ ಆ್ಯಪ್ ಮೂಲಕ ಕಳೆದುಕೊಂಡಿರುವುದಾಗಿ ಮಾಹಿತಿ ಹೊರಹಾಕಿದ್ದಾನೆ. ಇದಲ್ಲದೇ ಪತ್ನಿಗೂ ಸಹ ವಂಚಿಸಿ ಆಕೆಯ ಆಭರಣ ಸೇರಿದಂತೆ ಎಲ್ಲವನ್ನೂ ಕ್ರಿಕೆಟ್ ಬೆಟ್ಟಿಂಗ್ ಗೆ ಹಾಕಿರುವುದಾಗಿ ತಿಳಿದು ಬಂದಿದೆ.
ಸದ್ಯ ಯಲ್ಲಾಪುರ ಪೊಲೀಸರು ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ತೆಗೆದುಕೊಂಡಿದ್ದು, ಹಣದ ರಿಕವರಿಗಾಗಿ ಅನಧಿಕೃತವಾಗಿರುವ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.