ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರ ಕುರಿತು ಶಾಸಕಿ ರೂಪಾಲಿ ನಾಯ್ಕ್ ಹೇಳಿದ್ದೇನು?

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಜಿಲ್ಲೆಯ ಶಾಸಕರೆಲ್ಲ ಸೇರಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಜೊತೆ ಮಂಗಳವಾರ ಸಭೆ ನಡೆಸಿ ಚರ್ಚಿಸಿದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಆರ್ಥಿಕ ಇಲಾಖೆಗೂ ಪ್ರಸ್ತಾವನೆಯನ್ನು ನೀಡಲಾಗಿದೆ. ಶೀಘ್ರದಲ್ಲಿ ಸರ್ಕಾರದಿಂದ ಅಧೀಕೃತ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಹಲವು ವರ್ಷಗಳ ಹೋರಾಟಕ್ಕೆ ಫಲ ದೊರಕಿದೆ – ಶಾಸಕಿ ರೂಪಾಲಿ ನಾಯ್ಕ್

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಮಾತನಾಡಿ, ಜಿಲ್ಲೆಯ ಜನತೆಯ ಬಹುವರ್ಷದ ಬೇಡಿಕೆ ಆಗ್ರಹವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ಅಧಿವೇಶನ ಮುಗಿದ ಬಳಿಕ ಆರೋಗ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿ ಈ ಕುರಿತು ಮತ್ತೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತಾಗಿ 2018 ರಿಂದಲೇ ಸರ್ಕಾರ ಮನವಿಯನ್ನು ಮಾಡುತ್ತಿದ್ದೇನೆ. ಅಲ್ಲದೇ  ಅಧಿವೇಶನದಲ್ಲೂ ಸಹ ಈ ಕುರಿತಾಗಿ ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಈಗ ಫಲ ದೊರೆತಿರುವುದು ಸಂತಸದ ವಿಷಯವಾಗಿದೆ. ಇನ್ನೂ ಕಾರವಾರದ ಮೆಡಿಕಲ್ ಕಾಲೇಜನ್ನು ಉನ್ನತ ಮಟ್ಟಕ್ಕೆ ಏರಿಸುವ ಕುರಿತು ಮನವಿ ಮಾಡಲಾಗಿತ್ತು. ಅದಕ್ಕೂ ಸಹ ಆರೋಗ್ಯ ಸಚಿವರು ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿ ಬೇಕಾದ ತಜ್ನ ವೈದ್ಯರ ನೇಮಕ ಮಾಡಿ, ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ನೀಡಲಾಗುವುದೆಂದು ಹೇಳಿದ್ದಾರೆ.

ಆದಷ್ಟು ಬೇಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿ ಜನರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುವಂತಾದರೆ ನಮ್ಮ ಪ್ರಯತ್ನಕ್ಕೆ ಪೂರ್ಣ ಫಲ ದೊರೆತಂತಾಗುತ್ತದೆ ಎಂದು ಹೇಳಿದರು.