ಹೆಚ್ಚುತ್ತಿರುವ ಮಕ್ಕಳ ಕಳ್ಳರ ವದಂತಿ.! ಅಮಾಯಕರ ಮೇಲೆ ಮಕ್ಕಳ ಕಳ್ಳರೆಂದು ಹಲ್ಲೆ ಮಾಡಿದರೆ ಕೇಸ್.!

ಹಾವೇರಿ: ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿವೆ. ಇದರಿಂದ ಹಾವೇರಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಅಮಾಯಕರು, ಭಿಕ್ಷುಕರ ಮೇಲೆ ಹಲ್ಲೆ ಜನರು ಹಲ್ಲೆ ಮಾಡುತ್ತಿದ್ದಾರೆ. ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಐದು ಪ್ರಕರಣಗಳು ನಡೆದಿವೆ. ಸೆ.12ರಂದು ಬಾಂಬೆ ಮಿಠಾಮಿ ಮಾರಲು ಬಂದಿದ್ದ ಬಾಲಕನನ್ನು ಹಿಡಿದು ದೇವಗಿರಿ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದರು.

ಸೆಪ್ಟಂಬರ್ 15 ರಂದು ಬಂಕಾಪುರ ಪಟ್ಟಣದಲ್ಲಿ ಮಾತು ಬಾರದ ಭಿಕ್ಷುಕನನ್ನು ಹಿಡಿದು ಕಟ್ಟಿಹಾಕಿ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಸೆಪ್ಟಂಬರ್ 15 ರಂದು ತವರಮೆಳ್ಳಿಹಳ್ಳಿ ಗ್ರಾಮದಲ್ಲಿ ಮಕ್ಕಳ ಕಳ್ಳಿ ಬಂದಿದ್ದಾಳೆ ಎಂದು ಅಮಾಯಕ ಮಹಿಳೆಯನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ.

ಇನ್ನು ಸೆಪ್ಟಂಬರ್ 16 ರಂದು ರಾಣೆಬೆನ್ನೂರಿನ ಮಾರುತಿ ನಗರದಲ್ಲಿ ಮಕ್ಕಳ‌ ಕಳ್ಳರ ವದಂತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸುಳ್ಳು ವದಂತಿಗೆ ಸಾರ್ವಜನಿಕರು ಕಿವಿಗೊಡದಂತೆ ಎಸ್ಪಿ ಹನುಮಂತರಾಯ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಅಮಾಯಕರನ್ನು ಮಕ್ಕಳ ಕಳ್ಳರೆಂದು ತಡೆದು ಹಲ್ಲೆ ಮಾಡಿದರೆ ಕೇಸ್ ದಾಖಲಿಸೋ ಎಚ್ಚರಿಕೆ ನೀಡಿದ್ದಾರೆ. ಈವರೆಗೂ ಹಾವೇರಿ ಜಿಲ್ಲೆಯಲ್ಲಿ ಎಲ್ಲಿಯೂ ಮಕ್ಕಳ ಕಳ್ಳತನ ಪ್ರಕರಣ ನಡೆದಿಲ್ಲ ಎಂದು ಎಸ್ಪಿ ಹನುಮಂತರಾಯ ಸ್ಪಷ್ಟಪಡಿಸಿದ್ದಾರೆ.