ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಡಗುಂದಿ ಗ್ರಾ.ಪಂ ವ್ಯಾಪ್ತಿಯ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಗುಡ್ಡದ ಮಣ್ಣು ಕುಸಿಯುತ್ತಿದೆ.
ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಗುಡ್ಡದ ಮಣ್ಣು ಕಳೆದ ವರ್ಷ ಕುಸಿತವಾದ ಪ್ರದೇಶದಲ್ಲೇ ಮತ್ತೆ ಕುಸಿಯಲಾರಂಭಿಸಿದೆ. ಕಳೆದ ವರ್ಷ 4-5 ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಯುಟರ್ನ್ ಬಳಿ ಹೆದ್ದಾರಿಯೇ ಕುಸಿದು 15 ದಿನಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಈ ಬಾರಿಯೂ ಕಳೆದ 2-3 ದಿನಗಳಿಂದ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಮಳೆ ಮುಂದುವರಿದರೆ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ.
ರಸ್ತೆಯ ಬದಿಯಲ್ಲಿ ಮಣ್ಣು ಬೀಳುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಕುಸಿದ ಮಣ್ಣನ್ನು ಜೆಸಿಬಿ ಬಳಸಿ ಮುರುಗೇಶ ಶೆಟ್ಟಿ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.