ಕಾರವಾರ: ಗೋವಾದಿಂದ ಸುಮಾರು 1.5 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಹೇರಿಕೊಂಡು ಮಾಜಾಳಿಯ ತನಿಖಾ ಠಾಣೆಯಿಂದ ಸರಾಗವಾಗಿ ಸಾಗಿ ಬಂದ ಕಾರನ್ನು ಸದಾಶಿವಗಡದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು ಆರೋಪಿ ಪರಾರಿಯಾದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಡಾ. ಸುಮನ್ ಪನ್ನೇಕರ್ ಅವರು ಈ ಬಗ್ಗೆ ಖಚಿತ ಮಾಹಿತಿ ಪಡೆದು ಜಿಲ್ಲಾ ವಿಶೇಷ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತವಾದ ತಂಡ ತಾಲೂಕಿನ ಸದಾಶಿವಗಡದ ದೇವಬಾಗ ಕ್ರಾಸ್ ನಲ್ಲಿ ಗೋವಾ ಕಡೆಯಿಂದ ಬರುತ್ತಿದ್ದ ಗೋವಾ ನೋಂದಣಿಯ ಕಾರನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ಈ ವೇಳೆ ಕಾರು ಚಾಲಕನು ದೂರದಲ್ಲೇ ಕಾರು ನಿಲ್ಲಿಸಿ ಓಡಿ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ 27 ಪಾಲಿತಿನ್ ಚೀಲಗಳಲ್ಲಿ 770 ಲೀಟರ್ ಸಾರಾಯಿ ಬಾಟಲಿಗಳಿರುವುದು ಪತ್ತೆಯಾಗಿದೆ. ಮದ್ಯದ ಜೊತೆಗೆ ಸುಮಾರು 5 ಲಕ್ಷ ರೂ. ಮೌಲ್ಯದ ಕಾರನ್ನು ಜಪ್ತಿ ಪಡಿಸಿಕೊಂಡು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತನ ಪತ್ತೆಗೆ ಬಲೆ ಬೀಸಿದ್ದಾರೆ.
ಎಸ್.ಪಿ. ಡಾ. ಸುಮನ್ ಪನ್ನೇಕರ್, ಅಡಿಶನಲ್ ಎಸ್.ಪಿ. ಎಸ್ ಬದರಿನಾಥ ಮಾರ್ಗದರ್ಶನದಲ್ಲಿ ಜಿಲ್ಲಾ ವಿಶೇಷ ವಿಭಾಗದ ಪಿ.ಎಸ್.ಐ. ಪ್ರೇಮನಗೌಡ ಪಾಟೀಲ್, ಸಿಬ್ಬಂದಿಗಳಾದ ರಾಘವೇಂದ್ರ ಜಿ., ಭಗವಾನ ಗಾಂವಕರ, ಸಂತೋಷ್ ಕುಮಾರ್, ಮಹದೇವ ಸಿದ್ದಿ ಅವರ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಈ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಎಸ್.ಪಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.