
ಹೊನ್ನಾವರ : ತಾಲೂಕಿನ ಮಾಗೋಡಿನ ಡಾ. ಗಣೇಶ ಸುಬ್ರಾಯ ಹೆಗಡೆ ಇವರು, ರಸಾಯನಶಾಸ್ತ್ರ ವಿಭಾಗದಲ್ಲಿ ಮಂಡಿಸಿದ “ಬಯೋಮಾಸ್ ಡಿರಾಯ್ವ್ಡ ಹೈ ಸರಫೇಸ್ ಪೋರಸ್ ಕಾರ್ಬನ್ ಪಾರ್ ಎನರ್ಜಿ ಎಂಡ್ ಸೆನ್ಸಿಗ್ ಎಪ್ಲಿಕೇಷನ್” ಎಂಬ ಮಹಾಪ್ರಬಂಧಕ್ಕೆ ಎನ್.ಐ.ಟಿ.ಕೆ. ಸೂರತ್ಕಲ್‌ನಿಂದ ಪಿ.ಎಚ್.ಡಿ. ಪದವಿ ಲಭಿಸಿದೆ. ನವೆಂಬರ್ 23ರಂದು ಎನ್.ಐ.ಟಿ.ಕೆ.ಯ ರಜತಮಹೋತ್ಸವ ಸಭಾಂಗಣದಲ್ಲಿ ಜರುಗಿದ 22 ನೇ ಘಟಿಕೋತ್ಸವದಲ್ಲಿ ಇವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಭಾರತ ಸರ್ಕಾರ ಹಾಗೂ ಆಸಿಯಾನ್ ರಾಷ್ಟ್ರಗಳ ಸಹಭಾಗಿತ್ವದ ಅಂತರಾಷ್ಟ್ರೀಯ ಮಟ್ಟದ ಡೆಂಗ್ಯೂ ವೈರಸ್ ಮೇಲಿನ ಜೈವಿಕ ಸಂವೇದಕದ ಸಂಶೋಧನೆಗೆ ಇವರು ಯುವಸಂಶೋಧಕರಾಗಿ ಆಯ್ಕೆಯಾಗಿರುತ್ತಾರೆ. ಡಿ.ಲ.ಸಲ್ಲೆ ಯುನಿವರ್ಸಿಟಿ ಮನಿಲಾ ಫಿಲಿಪಿನ್ಸ್‌ನ ಭೌತಶಾಸ್ತ್ರ ವಿಭಾಗದಿಂದ ಇವರು “ವಿಸಿಟಿಂಗ್ ರಿಸರ್ಚರ್” ಆಗಿ ಆಹ್ವಾನಿತರಾಗಿ ಅಲ್ಲಿನ ಪ್ರಯೋಗಾಲಯಗಳಲ್ಲಿ ಸಂಶೋಧನೆ ನಡೆಸಿರುತ್ತಾರೆ. ಇದಲ್ಲದೆ ಯುನಿವರ್ಸಿಟಿ ಬ್ರುನೈ ದಾರುಸಲೆಮ್ ನ ರಸಾಯನಶಾಸ್ತ್ರ ವಿಭಾಗಕ್ಕೆ “ವಿಸಿಟಿಂಗ್ ಸ್ಕೋಲರ್” ಆಗಿ ಆಯ್ಕೆಯಾಗುವ ಮೂಲಕ ಬ್ರುನೈ ರಾಷ್ಟ್ರಕ್ಕೆ ಸಂಶೋಧಕರಾಗಿ ಭೇಟಿ ನೀಡಿರುತ್ತಾರೆ.
ಆಂದ್ರಪ್ರದೇಶದ ಎಮ್.ಐ.ಟಿ.ಎಸ್.ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ “ದಿ ಬೆಸ್ಟ್ ಪ್ರಸೆಂಟೇಷನ್” ಪ್ರಶಸ್ತಿಗೂ ಇವರು ಭಾಜನರಾಗಿರುತ್ತಾರೆ. ಪ್ರೊ. ಬಿ. ರಾಮಚಂದ್ರರ ಮಾರ್ಗದಲ್ಲಿ ಡಾ.ಶ್ರೀಗಣೇಶ ಹೆಗಡೆಯವರ ಹಲವಾರು ಸಂಶೋಧನಾತ್ಮಕ ಪ್ರಬಂಧಗಳು ಅಮೇರಿಕನ್ ಕೆಮಿಕಲ್ ಸೊಸೈಟಿ, ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಎಲ್ಸಿವಿಯರ್, ವಿಲ್ಲೈನಂತಹ ಪ್ರತಿಷ್ಠಿತ ಅಂತರಾಷ್ಟ್ರೀಯ ಮಟ್ಟದ ಜರ್ನಲ್ ಗಳಲ್ಲಿ ಪ್ರಕಟಗೊಂಡಿರುತ್ತದೆ. ಇದಲ್ಲದೆ ಇವರ ಡೆಂಗ್ಯೂ ರೋಗದ ಮೇಲಿನ ಸಂಶೋಧನಾ ಲೇಖನವನ್ನು ಎಲ್ಸಿವಿಯರ್ ಎನ್ನುವ ವೈಜ್ಞಾನಿಕ ಪತ್ರಿಕೆ ವಿಶ್ವಸಂಸ್ಥೆಯ, SDG-3 ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ ಆಯ್ಕೆ ಮಾಡಿರುತ್ತದೆ.
ಡಾ.ಶ್ರೀಗಣೇಶ ಇವರು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನೂ, ಕುಮಟಾದ ಡಾ.ಎ.ವಿ.ಬಾಳಿಗಾ ಮಹಾವಿದ್ಯಾಲಯದಲ್ಲಿ ವಿಜ್ಞಾನ ಪದವಿಯನ್ನು ಪಡೆದಿರುತ್ತಾರೆ. ಐ.ಐ.ಎಸ್.ಸಿ.ಆರ್. ಪುಣೆಯೂ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇವರು ಈ ಹಿಂದೆ ಸಂಶೋಧನೆಗಳನ್ನು ನಡೆಸಿರುತ್ತಾರೆ. ಹೊನ್ನಾವರ ತಾಲೂಕಿನ ಮಾಗೋಡದ ಕೃಷಿಕ ದಂಪತಿಗಳಾದ ಶ್ರೀಮತಿ ಮಹಾಲಕ್ಷೀ ಹೆಗಡೆ ಹಾಗೂ ಸುಬ್ರಾಯ ಹೆಗಡೆಯವರ ಸುಪುತ್ರರಾಗಿರುವ ಇವರು, ಪ್ರಸ್ತುತ ಐ.ಐ.ಟಿ. ಹೈದರಾಬಾದ್ ನಲ್ಲಿ ಪೋಷ್ಟ್ ಡಾಕ್ಟರಲ್ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.