ಕಾರವಾರ: ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತರದೆ ಕಾನೂನು ಬಾಹಿರವಾಗಿ ತಯಾರಿಸಿದ ಹೆಚ್ಚುವರಿ ವಸತಿ ಯೋಜನೆಯ ಫಲಾನುಭವಿಗಳ ಯಾದಿಯನ್ನು ತಡೆಹಿಡಿಯುವಂತೆ ಜಿ.ಪಂ ಸಿಇಓ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಹೊನ್ನಾವರ ತಾಲ್ಲೂಕಿನ ಹಳದಿಪುರ ಗ್ರಾಪಂ ಅಧ್ಯಕ್ಷ ಅಜಿತ ನಾಯ್ಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಸರ್ಕಾರದ ವಿವಿಧ ವಸತಿ ಯೋಜನೆಯಡಿಯಲ್ಲಿ 2022-23 ನೇ ಸಾಲಿಗೆ ಹೊನ್ನಾವರ , ಕುಮಟಾ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ಗಳಿಂದ ಹೆಚ್ಚುವರಿ ಫಲಾನುಭವಿಗಳ ಯಾದಿಯನ್ನು ತಯಾರಿಸಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಹಳದೀಪುರ ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿಯನ್ನು ನೀಡದೆ ಹೆಚ್ಚುವರಿ ಫಲಾನುಭವಿಗಳ ಯಾದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಬಗ್ಗೆ ವಿಷಯ ತಿಳಿದು ತಾ.ಪಂ ಕಾರ್ಯಾಲಯಕ್ಕೆ ವಿಚಾರಿಸಿದರೆ ಹಾರಿಕೆಯ ಉತ್ತರವನ್ನು ನೀಡಿ ನುಣುಚಿಕೊಂಡಿದ್ದಾರೆ ಎಂದು ಹೇಳಿದರು.
ಯಾವುದೇ ವಸತಿ ಯೋಜನೆಯಡಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಒಪ್ಪಿಗೆಯ ಮೇರೆಗೆ ಅರ್ಹ ಫಲಾನುಭವಿಗಳ ಯಾದಿಯನ್ನು ತಯಾರಿಸಿ ಅದಕ್ಕೆ ಪಿಡಿಓ ಹಾಗೂ ಅಧ್ಯಕ್ಷರ ಸೀಲ್ ಹಾಗೂ ಸಹಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸುವುದು ನಿಯಮವಾಗಿದೆ. ಆದರೆ ಹೊನ್ನಾವರ ತಾಪಂ ಸ್ಥಳೀಯ ಗ್ರಾಪಂಗೆ ಇರುವ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದರೊಂದಿಗೆ ಸರ್ವಾಧಿಕಾರಿ ಧೋರಣೆ ತೋರಿ, ಅಧ್ಯಕ್ಷರು ಹಾಗೂ ಸದಸ್ಯರ ಅಸ್ತಿತ್ವಕ್ಕೆ ಹಾಗೂ ಅಧಿಕಾರಕ್ಕೆ ಅವಮಾನವಾಗುವ ರೀತಿ ನಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಯಾದಿಯನ್ನು ಗ್ರಾಮ ಪಂಚಾಯಿತಿಯಿಂದ ಪಡೆಯದಿದ್ದರೂ ಯಾದಿಯಲ್ಲಿ ಗ್ರಾ.ಪಂ.ದಿಂದ ಪಡೆದು ಸಲ್ಲಿಸಲಾಗಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಲಾಗಿದೆ. ಇದರಿಂದ ತೀರಾ ಅವಶ್ಯವಾಗಿ ಅಗತ್ಯವಿರುವ ಬಡವರಿಗೆ ಮನೆ ದೊರೆಯದೆ ಅನ್ಯಾಯವಾದಂತಾಗಿದೆ. ಹೀಗಾಗಿ ಗ್ರಾಮಪಂಚಾಯಿತಿ ಗಮನಕ್ಕೆ ತರದೇ ಅಕ್ರಮವಾಗಿ ತಯಾರಿಸಿ ಸಲ್ಲಿಸಿದ ಹೆಚ್ಚುವರಿ ಫಲಾನುಭವಿಗಳ ಯಾದಿಯನ್ನು ತಡೆ ಹಿಡಿದು , ಹಳದೀಪುರ ಗ್ರಾಮಪಂಚಾಯಿತಿಯಿಂದ ಯಾದಿಯನ್ನು ಪಡೆದು ಸಲ್ಲಿಸುವಂತೆ ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಜಿಪಂ ಸಿಇಓ ಅವರಿಗೆ ಮನವಿ ಮಾಡಲಾಗಿದೆ ಎಂದ ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ನ್ಯಾಯ ಸಿಗದಿದ್ದರೆ ಮುಂದೆ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲಾಗುವುದು ಎಂದಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ಸದಸ್ಯರಾದ ಗೋವಿಂದ ಜೋಶಿ, ಗಂಗೆ ಗೌಡ, ಮಂಗಲಾ ಮುಕ್ರಿ, ವರ್ಧಮಾನ ಜೈನ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.