FLOOD BREAKING ಗುಂಡಬಾಳ ನದಿ ನೀರು ತುಂಬಿ ಅನಾಹುತ.! 20 ಕ್ಕೂ ಹೆಚ್ಚು ಮಂದಿ ಕಾಳಜಿ ಕೇಂದ್ರಕ್ಕೆ ಶಿಫ್ಟ್.! ನದಿತೀರದ ಜನರಿಗೆ ಆತಂಕ.!

ಹೊನ್ನಾವರ: ತಾಲೂಕಿನಲ್ಲಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮ ಭಾನುವಾರ ಗುಂಡಬಾಳ ನದಿ ಭರ್ತಿಯಾಗಿ ಏಕಾಏಕೀ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆ ಇಂದೂ ಕೂಡಾ ಬಿಡುವು ನೀಡದ ಕಾರಣ ಎಲ್ಲೆಡೆ ಜಲಮಯವಾಗಿದ್ದು, ನದಿಯಲ್ಲಿ ನೀರಿನ ಹರಿಯುವಿಕೆ ಜಾಸ್ತಿಯಾಗಿ ಮತ್ತೆ ನೆರೆಹಾವಳಿ ಉಂಟಾಗಿದೆ. ಕೆಲವು ದಿನದ ಹಿಂದೆ ಕಾಳಜಿ ಕೇಂದ್ರದಿಂದ ಮನೆಗೆ ಬಂದು ಸಹಜ ಸ್ಥಿತಿಗೆ ಮರಳುವಷ್ಟರಲ್ಲೇ ಮತ್ತೆ ಸುರಿದ ಮಳೆಗೆ ಪುನಃ ಕಾಳಜಿ ಕೇಂದ್ರದತ್ತ ಮುಖ ಮಾಡುವಂತಾಗಿದೆ.

ಗುಂಡಬಾಳ ನದಿ ಉಕ್ಕಿ ಹರಿಯುತ್ತಿದ್ದು ನದಿಯ ಎಡಬಲದಂಡೆಯಲ್ಲಿನ ನಿವಾಸಿಗಳು ಆತಂಕಿತರಾಗಿ ಪ್ರವಾಹದ ಸಂಕಷ್ಟ ಎದುರಿಸುವಂತಾಗಿದೆ. ಹಲವೆಡೆ ತೋಟ, ಗದ್ದೆ, ಮನೆಗಳಿಗೆ ನೀರು ನುಗ್ಗಿದೆ.

ಚಿಕ್ಕನಕೋಡ ಗ್ರಾ. ಪಂ. ವ್ಯಾಪ್ತಿಯ ಗುಂಡಿಬೈಲ್, ಚಿಕ್ಕನಕೋಡ, ಗುಂಡಬಾಳ, ಹೆಬೈಲ್ ಗ್ರಾಮದಲ್ಲಿ ಗುಂಡಬಾಳ ನದಿಯ ನೀರು ಆವರಿಸುತ್ತಿದೆ. ಹಡಿನಬಾಳ ಹಾಗೂ ಖರ್ವಾ ಗ್ರಾ,ಪಂ ವ್ಯಾಪ್ತಿಯ ನಾಥಗೇರಿ, ಕಡಗೇರಿ, ಕೂಡ್ಲ ತಗ್ಗು ಪ್ರದೇಶಗಳಲ್ಲಿಯೂ ನೀರು ಆವರಿಸಿದೆ. ಇನ್ನು ರಣಭೀಕರ ಮಳೆಯಿಂದ ಎಲ್ಲೆಡೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.

ಕಂದಾಯ, ಪೊಲೀಸ್‌, ಪಂಚಾಯತ ಮಟ್ಟದ ಅಧಿಕಾರಿಗಳು ಹಾಗೂ ನಿಯೋಜಿಸಲಾದ ನೋಡಲ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಸಾರ್ವಜನಿಕರನ್ನು ಕಾಳಜಿ ಕೇಂದ್ರದತ್ತ ಕರೆದೊಯ್ಯುತ್ತಿದ್ದಾರೆ. ಚಿಕ್ಕನಗೋಡಿನ ಹರಿಜನ ಕೇರಿ ಹಾಗೂ ಕ್ರಿಶ್ಚಿಯನ್ ಕೇರಿಗಳ ಮನೆಗಳಿಗೆ ನೀರು ನುಗ್ಗಿ ಅನಾಹುತವಾಗಿದ್ದು, 20 ಕ್ಕೂ ಅಧಿಕ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.