ಮೋದಿ ಶಿರಸಿಯಲ್ಲಿದ್ದಾರಾ.?! ಇಲ್ಲ ಇಲ್ಲ ಮೋದಿಯಂತೆ ಹೋಲುವ ವ್ಯಕ್ತಿ ಶಿರಸಿಯಲ್ಲಿ ಪ್ರತ್ಯಕ್ಷ.! ಗಣೇಶ ವಿಸರ್ಜನೆಯಲ್ಲಿ ಜನರತ್ತ ಕೈ ಬೀಸಿ ಗಮನ ಸೆಳೆದ ಸದಾನಂದ.!

ಶಿರಸಿ: ಕಳೆದ ಎರಡು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಶಿರಸಿಯಲ್ಲೇ ಇದ್ದಾರೆ. ಎಲ್ಲರೊಂದಿಗೇ ತೆರಳಿ ಚಹಾ ಕುಡಿಯುತ್ತಿದ್ದಾರೆ. ಕನ್ನಡದಲ್ಲೇ ಮಾತನಾಡುತ್ತಾರೆ.! ಕ್ಷಮಿಸಿ, ಈ ವ್ಯಕ್ತಿ ಪ್ರಧಾನಿ ಮೋದಿಯಲ್ಲ, ಅವರಂತೇ ಕಾಣುವ ಉಡುಪಿ ಜಿಲ್ಲೆಯ ಹಿರಿಯಡ್ಕದ ಸದಾನಂದ ನಾಯಕ ಎನ್ನುವವರು. ವೇಷಭೂಷಣ ಹಾವಭಾವ ಎಲ್ಲದರಲ್ಲೂ ಪ್ರತ್ಯಕ್ಷ ಮೋದಿ ಕಂಡಂತೆ ಕಾಣುತ್ತಾರೆ.

ಗಣೇಶೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಶಿರಸಿಗೆ ಆಗಮಿಸಿದ್ದಾರೆ. ಪ್ರಧಾನಿ ಮೋದಿಯಂತೆ ಕಾಣುವ 64 ವರ್ಷದ ಸದಾನಂದ ಅವರನ್ನ ಶುಕ್ರವಾರ ರಾತ್ರಿ ನಡೆದ ನಗರದ ದೇವಿಕೆರೆ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಸಮಿತಿಯವರು ಇವರನ್ನು ಕರೆಸಿದ್ದರು. ಮೆರವಣಿಗೆ ಅರಂಭದಲ್ಲಿ ನಂತರ ಹಳೆ ಬಸ್ ನಿಲ್ದಾಣ ವೃತ್ತಕ್ಕೆ ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಂತೆ ಅವರು ಆಗಮಿಸಿ ಗಮನಸೆಳೆದರು. ತೆರೆದ ವಾಹನದಲ್ಲಿ ಅವರು ತೆರಳಿದರು. ಅವರೊಂದಿಗೆ ಪೊಟೋ ತೆಗೆಸಿಕೊಳ್ಳಲು ಜನ ಮುಗಿಬಿದ್ದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ತೆರಳಿ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಶನಿವಾರ ಸಂಜೆ ನಗರದ ವಿವೇಕಾನಂದ ನಗರದ ಗೆಳೆಯ ಬಳಗದವರು ಪ್ರತಿಷ್ಠಾಪಿಸಿದ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಅವರು ಪಾಲ್ಗೊಂಡರು. ಈ ವೇಳೆ ಮಾತನಾಡಿದ ಸದಾನಂದ ನಾಯಕ, 2017 ರಲ್ಲಿ ಹರಿದ್ವಾರಕ್ಕೆ ತೆರಳಿದ್ದೆವು. ಗಂಗಾನದಿ ತೀರದಲ್ಲಿ ಓಡಾಡುವಾಗ ನಾಗಾ ಸಾಧುಗಳು ನನ್ನನ್ನು ನೋಡಿ ನಿಮ್ಮ ಮುಖ ಮೋದಿ ಮುಖಕ್ಕೆ ತುಂಬಾ ಹೋಲುತ್ತದೆ. ದಾಡಿಯನ್ನು ಜೀವನದಲ್ಲಿ ಯಾವಾಗಲೂ ತೆಗೆಯಬೇಡಿ ಎಂದಿದ್ದರು.

ನಂತರ ಉಡುಪಿಗೆ ಬಂದ ಮೇಲೆ ಕಾರ್ಯಕ್ರಮವೊಂದರಲ್ಲಿ ಜುಬ್ಬಾ ಹಾಕಿದ್ದೆ. ಅದು ಗಮನಸೆಳೆಯುವಂತಾಯಿತು. ಆ ನಂತರ ಮೋದಿ ವೇಷಭೂಷಣ ಹಾಕತೊಡಗಿದೆ. ಆ ನಂತರ ಹಲವು ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು. ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳಿದ್ದೆವು. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ದೆಹಲಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಮೋದಿ, ರಾಜನಾಥ ಸಿಂಗ್ ಎಲ್ಲರೂ ಇದ್ದರು. ಮೋದಿ ಅವರು ಹಾಯ್ ಎಂದು ಹೇಳಿದ್ದರು ಎಂದು ನೆನಪಿಸಿದರು.

ತಾನು ಪ್ರಧಾನಿ ಮೋದಿಯ ಕಟ್ಟಭಿಮಾನಿ. ಮೋದಿ ಒಳ್ಳೆಯ ರಾಜನೀತಿಜ್ಞ. ದೇಶದ ಅಭಿವೃದ್ಧಿಗೆ ಮೋದಿ ಒಳ್ಳೆಯ ಕೊಡುಗೆ ನೀಡುತ್ತಿದ್ದಾರೆ. ಮೊದಿ, ಯೋಗಿಯಂತಹ ನಾಯಕರು ನಮ್ಮ ದೇಶಕ್ಕೆ ಬೇಕು. ಬಿಜೆಪಿ ಬೆಂಬಲಿಗನಾಗಿ ಮುಂಬರುವ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೇನೆ ಎಂದರು.