ಕೆಳವರ್ಗದವರ ಕಲ್ಯಾಣದ ಕ್ರಾಂತಿಯನ್ನು ಶಾಂತಿಯ ಮೂಲಕ ಯಶಸ್ವಿಗೊಳಿಸಿದ ಸಂತ ನಾರಾಯಣಗುರು – ಕೋಟಾ ಶ್ರೀನಿವಾಸ ಪೂಜಾರಿ

ಕುಮಟಾ: ಜಾತಿ ವೈಷಮ್ಯದಿಂದ ನಲುಗಿದ್ದ ಸಮಾಜದಲ್ಲಿ ಸಮಾನತೆಯ ಅರಿವು ಮೂಡಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಕೆಳವರ್ಗದವರ ಕಲ್ಯಾಣವನ್ನು ಕ್ರಾಂತಿಯನ್ನು ಶಾಂತಿ ಮೂಲಕ ಯಶಸ್ವಿಗೊಳಿಸಿದ ಸಂತರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಉದ್ಘಾಟಿಸಿ, ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾರಾಯಣ ಗುರುಗಳು ಎಲ್ಲ ಸಮಾಜಗಳಿಗೂ ವಂದನೀಯ. ಅವರ ಕ್ರಾಂತಿಕಾರಿ ನಡೆಗಳಿಂದಲೇ ಈ ಸಮಾಜದಲ್ಲಿದ್ದ ಕಲ್ಮಶಗಳನ್ನು ತೊಡೆದುಹಾಕಲಾಗಿದೆ. ಭಟ್ಕಳದಲ್ಲಿ ಗುರುಗಳ ಹೆಸರಿನಲ್ಲಿ ನಿರ್ಮಾಣವಾದ ವಸತಿ ಶಾಲೆಯನ್ನು ನನ್ನ ಕ್ಷೇತ್ರವಾದ ಕುಮಟಾಕ್ಕೂ ಮಂಜೂರಿ ಮಾಡಿಸಿಕೊಡುವ ಮೂಲಕ ನಮ್ಮ ಭಾಗದ ಹಿಂದುಳಿದ ವರ್ಗಗಳ ಮಕ್ಕಳಿಗೆ ಆಸರೆ ಒದಗಿಸಿಕೊಡಲು ಅವಕಾಶ ಮಾಡಿಕೊಡಬೇಕು ಎಂದು ಸಚಿವರನ್ನು ವಿನಂತಿಸಿದರು.

ನಿವೃತ್ತ ಪ್ರಾಧ್ಯಾಪಕ ಎಂ ಜಿ ನಾಯ್ಕ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ನಿಮಿತ್ತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಪವಿಭಾಗಾಧಿಕಾರಿ ರಾಘವೇಂದ್ರ ಬಿ ಜಗಲದಾರ್, ತಹಸೀಲ್ದಾರ್ ವಿವೇಕ ಶೇಣ್ವಿ, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.