ಭಟ್ಕಳ: ಏಕಾಏಕಿ ನಾಮಧಾರಿ ಸಮಾಜದ ಓರ್ವ ವ್ಯಕ್ತಿಯ ಮೇಲೆ ಎಸ್ಪಿ ಸ್ಕ್ವಾಡ್ ಅಧಿಕಾರಿಗಳು ಮಧ್ಯರಾತ್ರಿಯಲ್ಲಿ ಮುರುಡೇಶ್ವರ ನಾಕೆಯ ಬಳಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಭಟ್ಕಳ ನಾಮಧಾರಿ ಸಮಾಜ ಹಾಗೂ ಮಾವಳ್ಳಿ ಸಮಾಜ ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಶಿರಾಲಿ ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಮಾಜ ಮುಖಂಡರು ಮಾತನಾಡಿದರು.
ಈ ವೇಳೆ ಹಲ್ಲೆಗೊಳಗಾದ ವಾಸು ನಾಯ್ಕ ಮಾತನಾಡಿ ನಾನು ಕಳೆದ 1 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಈ ಹಿನ್ನೆಲೆಯಲ್ಲಿ ನನ್ನ ಸಂಬಂಧಿಕರೊಂದಿಗೆ ಕಾರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಮಾರ್ಗಮಧ್ಯ ಮೂತ್ರ ವಿಸರ್ಜನೆಗೆಂದು ಇಳಿದಾಗ ಎರಡು ಕಾರು ಹಾಗೂ ಒಂದು ಬೈಕ್ ನಲ್ಲಿ ಏಕಾಏಕಿ ಹಿಂದಿನಿಂದ ಬಂದು ಕೈಗಳನ್ನು ಲಾಕ್ ಮಾಡಿ ‘ಇಲ್ಲಿ ಏನು ಕಳ್ಳತನ ಮಾಡಲು ಬಂದಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ನಾನು ಗ್ರಾಮ ಪಂಚಾಯತ ಸದಸ್ಯ ನಾನು ಆಸ್ಪತ್ರೆಗೆ ಹೋಗುತ್ತಿದ್ದೇನೆ ನನಗೆ ತೊಂದರೆ ಕೊಡಬೇಡ ಎಂದು ಹೇಳಿದೆ. ಜೊತೆಗೆ ನೀವು ಯಾರೆಂದು ಪ್ರಶ್ನಿಸಿದಾಗ ನಾವು ಯಾರೆಂದು ತೋರಿಸುತ್ತೇವೆ ಎಂದು ಹೇಳಿ ಮತ್ತೆ ಏಳರಿಂದ ಎಂಟು ಮಂದಿ ಬಂದು ನನ್ನ ಮೇಲೆ 15 ನಿಮಿಷಗಳ ಕಾಲ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ನಂತರ ನನ್ನ ಜೊತೆಗೆ ಬಂದ ಸಂಬಂಧಿಕನು ಹೆದರಿಕೊಂಡು ಅಲ್ಲೇ ಮುಂದೆ ಹೋಗಿ 112 ವಾಹನಕ್ಕೆ ಕರೆ ಮಾಡಿ ಬರುವ ವೇಳೆ ನನ್ನನ್ನು ಸಾಯುವ ಸ್ಥಿತಿಗೆ ತಂದಿದ್ದಾರೆ. ಬಳಿಕ 112 ವಾಹನದಲ್ಲಿ ಮುರುಡೇಶ್ವರ ಪೊಲೀಸ ಠಾಣೆಗೆ ಹೋದಾಗ ನನ್ನ ಮೇಲೆ ಹಲ್ಲೆ ನಡೆಸಿದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವಿಶೇಷ ತಂಡ (ಎಸ್ಪಿ ಸ್ಕ್ವಾಡ್) ಎಂದು ತಿಳಿಯಿತು.
ಆದರೆ ಅಲ್ಲಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಸಿಕೊಂಡಿಲ್ಲ. ನಂತರ ನಾನು ಆಸ್ಪಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದೇನೆ ಎಂದ ಅವರು ನನಗೆ ಹಲ್ಲೆ ಮಾಡಿದ ಎಲ್ಲಾ ಅಧಿಕಾರಿಗಳ ಮೇಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ನಂತರ ಮಾವಳ್ಳಿ ನಾಮಧಾರಿ ಸಮಾಜದ ಅಧ್ಯಕ್ಷ ಸುಬ್ರಾಯ್ ನಾಯ್ಕ ಮಾತನಾಡಿ ಪೊಲೀಸ್ ಇಲಾಖೆಯ ಮೇಲೆ ನಮಗೆ ಅಪಾರ ಗೌರವವಿದೆ. ನಮ್ಮ ಸಮಾಜದ ಎಲ್ಲಾ ಕಾರ್ಯಕ್ರಮಕ್ಕೂ ಸಹಕಾರ ನೀಡಿದ್ದಾರೆ. ಅದೇ ರೀತಿ ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅನ್ಯಾಯವಾದರೆ ನಾವು ಅದನ್ನು ಪ್ರಶ್ನಿಸುವುದು ನಮ್ಮ ಸಮಾಜದ ಕರ್ತವ್ಯ. ನಮ್ಮ ಸಮಾಜದ ವಾಸು ನಾಯ್ಕ ಮೇಲೆ ಆಸ್ಪತ್ರೆಗೆ ಹೋಗುವ ವೇಳೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂದು ನಮ್ಮ ಸಮಾಜದ ಗಮನಕ್ಕೆ ತಂದಿದ್ದಾರೆ. ಪೊಲೀಸರು ನಮ್ಮನ್ನು ರಕ್ಷಣೆ ಮಾಡಬೇಕು ಹೊರತು ಶಿಕ್ಷೆ ಕೊಡುವ ಅಧಿಕಾರವಿಲ್ಲ. ಸದ್ಯ ಈತನಿಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದರು.
ನಂತರ ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ ಎಸ್ಪಿ ಸ್ಕ್ವಾಡ ಎನ್ನುವುದು ಕೇವಲ ಪುಂಡಾಟಿಕೆ ತಂಡವಾಗಿ ವರ್ತನೆ ಮಾಡುತ್ತಿದೆ. ಇವರಿಗೆ ಮಾಡಲು ಬೇಕಾದಷ್ಟು ಕೆಲಸವಿದೆ. ಕೇಂದ್ರದ ಎನ್.ಐ.ಎ ತಂಡ ಬಂದು ಉಗ್ರಗಾಮಿಗಳು ಹಿಡಿದುಕೊಂಡು ಹೋಗುತ್ತಾರೆ. ಇವರು ಸ್ಕ್ವಾಡ್ ಎಂದು ಇರುವುದಾದರು ಏಕೆ.? ಎಂದು ಪ್ರಶ್ನಿಸಿದರು. ನಮ್ಮ ಸಮಾಜದ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ನಡೆದಿರುವುದು ಖಂಡನೀಯ. ಹಲ್ಲೆ ನಡೆಸಿದವರ ಮೇಲೆ ಸರಿಯಾದ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕಾನೂನು ಕ್ರಮ ಕೈಗೊಳ್ಳದೆ ಈತನ ಮೇಲೆ ಪುನಃ ಪ್ರಕರಣ ದಾಖಲಿಸುವ ಹುನ್ನಾರ ಮಾಡಿದರೆ ನಮ್ಮ ಸಮಾಜದಿಂದ ಪ್ರತಿಭಟನೆ ನಡೆಸುತ್ತೇವೆ ಮತ್ತು ಇದರ ಆಗುಹೋಗುಗಳಿಗೆ ನೇರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಕಾರಣ ಎಂದರು.
ಸುದ್ದಿಗೋಷ್ಠಿಯಲ್ಲಿ ಸಾರದಹೊಳೆ ಹಳೆ ಕೋಟೆ ಹನುಮಂತ ದೇವಸ್ಥಾನದ ಮೊಕ್ತೆಸರರಾದ ಸುಬ್ರಾಯ ನಾಯ್ಕ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಸಮಾಜದ ಮುಖಂಡರಾದ ವಿಜಯ ಕುಮಾರ ನಾಯ್ಕ, ಕುಮಾರ ನಾಯ್ಕ, ಈಶ್ವರ ನಾಯ್ಕ ಬೈಲೂರು, ತಿಮ್ಮಪ್ಪ ನಾಯ್ಕ ಮಾವಳ್ಳಿ ಹಾಗೂ ಮುಂತಾದವರು ಉಪಸ್ಥಿತರಿದ್ದರು