ಕೊಳೆರೋಗದಿಂದ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರಿಗೆ ಶೀಘ್ರ ಪರಿಹಾರ ನೀಡುವಂತೆ ಭೀಮಣ್ಣ ನಾಯ್ಕ್ ಆಗ್ರಹ

ಶಿರಸಿ: ಮಳೆಯಿಂದಾಗಿ ತಾಲೂಕಿನ ಎಲ್ಲೆಡೆ ಅಡಕೆಗೆ ಕೊಳೆರೋಗ ತೀವೃವಾಗಿದೆ. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಅಡಕೆ ಬೆಳೆಗಾರರಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರೈತರು ಈಗಾಗಲೇ ಮೂರ್ನಾಲ್ಕು ಬಾರಿ ಅಡಕೆ ಮರಗಳಿಗೆ ಬೋರ್ಡೋ ಸಿಂಪಡಣೆ ಮಾಡಿದ್ದಾರೆ. ಇಷ್ಟಾದರೂ ಕೊಳೆ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ತಾಲೂಕಿನಲ್ಲಿ ಶೇ. 80 ರಷ್ಟು ಅಡಕೆ ತೋಟದಲ್ಲಿ ಕೊಳೆ ಕಾಣಿಸಿಕೊಂಡಿದೆ. ಇದರಿಂದ ಅಪಾರ ಬೆಳೆ ಹಾನಿಯನ್ನು ರೈತರು ಅನುಭವಿಸಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸಿ ತ್ವರಿತವಾಗಿ ಹಾನಿಯ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂದರು.

ಅಲ್ಲದೇ ಅಡಿಕೆ ಬೆಳೆಗಾರರ ಸ್ಥಿತಿಯಂತೆ ಮೆಕ್ಕೆ ಜೋಳ ಬೆಳೆಗಾರರದ್ದೂ ಇದೆ. ಬಿತ್ತಿದ ಬೀಜವೂ ಸಹ ಹಾನಿಯಾಗಿದೆ. ಅಡಕೆ ಬೆಳೆಗಾರರನ್ನೂ ಒಳಗೊಂಡಂತೆ ಮೆಕ್ಕೆಜೋಳದ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ತ್ವರಿತ ಪರಿಹಾರ ನೀಡಿದ್ದೆವು. ಅದೇ ಮಾದರಿಯಲ್ಲಿಯೇ ಪರಿಹಾರ ಒದಗಿಸಬೇಕು ಎಂದರು.

ಶಿರಸಿಯ ಹಳೇ ಬಸ್ ನಿಲ್ದಾಣದ ಕಾಮಗಾರಿ ಈಗ ಆರಂಭಗೊಳ್ಳುತ್ತಿದೆ. ಇದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಲಿದ್ದಾರೆ. ಎಲ್ಲರೂ ಹೊಸ ಬಸ್ ನಿಲ್ದಾಣಕ್ಕೆ ತೆರಳಲು ಸಾಧ್ಯವಾಗದ ಕಾರಣ, ಐದು ರಸ್ತೆ ವೃತ್ತದಲ್ಲಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಈ ಸಂದರ್ಭದಲ್ಲಿ ದೀಪಕ್ ದೊಡ್ಡೂರು, ಎಸ್ ಕೆ ಭಾಗ್ವತ್, ಸತೀಶ ನಾಯ್ಕ, ಜಗದೀಶ ಗೌಡ, ಗೀತಾ ಭೋವಿ ಹಾಗೂ ಇತರರು ಉಪಸ್ಥಿತರಿದ್ದರು.