ನೌಕಾನೆಲೆಗೆ ಅಕ್ರಮ ಪ್ರವೇಶ.! ನಾಲ್ವರು ಅಪರಿಚಿತರ ಮೇಲೆ ದೂರು ದಾಖಲು.!

ಕಾರವಾರ: ಏಷ್ಯಾದ ಅತೀ ದೊಡ್ಡ ನೌಕಾನೆಲೆಯಾಗುವತ್ತ ದಾಪುಗಾಲಿಟ್ಟಿರುವ ತಾಲೂಕಿನ ಐ.ಎನ್.ಎಸ್. ಕದಂಬ ನೌಕಾನೆಲೆಯ ವ್ಯಾಪ್ತಿಯೊಳಗೆ ಯಾರೋ ಅಪರಿಚಿತರು ಅಕ್ರಮವಾಗಿ ಪ್ರವೇಶಿಸಿರುವ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ನೌಕಾಸೇನಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ಸೆ. 1 ರಂದು ಸಂಜೆ 7.40 ರ ಸುಮಾರಿಗೆ ಯಾರೋ ನಾಲ್ವರು ಅಪರಿಚಿತರು ನಿಷೇಧಿತ ನೌಕಾ ಪ್ರದೇಶವಾದ ಕ್ವಾಡಾ ಬೇ ಬೀಚ್ ಬಳಿ ಇರುವುದು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದ ನೌಕಾ ಅಧಿಕಾರಿಗಳು ಹಾಗೂ ಯೂನಿಟ್ ಸೆಕ್ಯೂರಿಟಿ ಟೀಂ ನವರು ಸ್ಥಳಕ್ಕೆ ತೆರಳಿ ಹುಡುಕಾಡಿದ್ದು ಯಾರೂ ಪತ್ತೆಯಾಗಿರಲಿಲ್ಲ. ಬಳಿಕ ವಿಷಯ ತಿಳಿದು ಕರಾವಳಿ ಕಾವಲು ಪಡೆಯ ಮಂಗಳೂರು ವಿಭಾಗದ ಎಸ್.ಪಿ. ಸೇರಿದಂತೆ ತಂಡವು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತ್ತು. ಅದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮವೂ ಇದ್ದ ಕಾರಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು.

ಬಳಿಕ ಸ್ಥಳೀಯ ಮೀನುಗಾರರೇ ಈ ಪ್ರದೇಶದಲ್ಲಿ ಬಂದಿರುವುದು ಎಂದು ಅನುಮಾನ ವ್ಯಕ್ತ ಪಡಿಸಿ ಈ ಬಗ್ಗೆ ಹಲವರ ವಿಚಾರಣೆಯನ್ನೂ ನಡೆಸಿದ್ದರು. ಆದರೆ ಇದುವರೆಗೂ ನೌಕಾನೆಲೆಯಲ್ಲಿ ಅಕ್ರಮ ಪ್ರವೇಶಿಸಿದವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದೀಗ ಘಟನೆ ನಡೆದು 8 ದಿನಗಳ ಬಳಿಕ ಕರ್ನಾಟಕ ನೇವಲ್ ಬೇಸ್ ನ ಲೆಫ್ಟಿನೆಂಟ್ ಆಫೀಸರ್ ದಿ ಕಮಾಂಡಿಂಗ್ ಆಫೀಸರ್ ಅಶುತೋಷ ತಿವಾರಿ ಅವರು ಗುರುವಾರ ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕೋಸ್ಟಲ್ ಪೊಲೀಸ್ ಹಾಗೂ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸಿ ಅಕ್ರಮ ಪ್ರವೇಶ ಮಾಡಿದ ನಾಲ್ವರು ಅಪರಿಚಿರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.