ಶಿರಸಿ: ವಿವಾಹಿತೆಯನ್ನು ಪ್ರೀತಿಸುತ್ತಿರುವ ಬಗ್ಗೆ ಕೇಳಿದ್ದಕ್ಕೆ ವ್ಯಕ್ತಿಯೋರ್ವ ಇಬ್ಬರಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ತಾಲೂಕಿನ ಬನವಾಸಿಯಲ್ಲಿ ನಡೆದಿದೆ. ಮನ್ಸೂರ್ ಅಬ್ದುಲ್ ಕರೀಂ ಶೇಕ್ ಹಲ್ಲೆ ನಡೆಸಿದ ವ್ಯಕ್ತಿ.
ವಿವಾಹಿತೆಯ ಸಹೋದರರಾದ ನದೀಂ ಮತ್ತು ಇಬ್ರಾಹಿಂ ಗಾಯಗೊಂಡಿದ್ದಾರೆ. ವಿವಾಹ ಆದ ಬಳಿಕವೂ ಮನ್ಸೂರ್ ಆಕೆಯೊಂದಿಗೆ ಪ್ರೀತಿ ಹೊಂದಿದ್ದ. ಈ ವಿಷಯಕ್ಕೆ ಸಂಬಂಧಿಸಿ ಹಲವು ಬಾರಿ ಮಾತು ಚಕಮಕಿ ಆಗಿತ್ತು. ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸುವ ಸಲುವಾಗಿ ಬನವಾಸಿಯ ಅಹ್ಲೆ ಸುನ್ನತ್ ಜಮಾತ್ ಕಾರ್ಯದರ್ಶಿ ಅಷ್ಪಾಕ್ ಅಲಿ ಮನೆಯಲ್ಲಿ ಶುಕ್ರವಾರ ಸಭೆ ನಡೆಸಲಾಗಿತ್ತು.
ಈ ಸಂದರ್ಭದಲ್ಲಿ ಸೇರಿದ್ದ ಜಮಾತಿನ ಮುಂದೆಯೇ ನದೀಂ ಮತ್ತು ಮನ್ಸೂರ್ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮನ್ಸೂರ್ ಇಬ್ರಾಹಿಂ ನು ನದೀಂಗೆ ಗುದ್ದಿ ಹಲ್ಲೆ ನಡೆಸಿದ್ದಾನಲ್ಲದೇ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಕೈ ಮತ್ತು ಭುಜಕ್ಕೆ ಹಲವಾರು ಬಾರಿ ಚುಚ್ಚಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.