ಗುಜರಾತ್: ಸಬರಮತಿ ಆಶ್ರಮದ ಸುತ್ತಲಿನ ಪುನರ್ ಅಭಿವೃದ್ಧಿ ಕಾರ್ಯಗಳಿಗೆ ತಡೆ ನೀಡುವಂತೆ ಮಹಾತ್ಮಾ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳೊಸಿದೆ. ಆಶ್ರಮಕ್ಕೆ ಯಾವುದೇ ದಕ್ಕೆಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಕೋರ್ಟ್ ಅರ್ಜಿ ವಜಾ ಮಾಡಿ ಆದೇಶ ನೀಡಿದೆ.
ಸಬರಮತಿ ಆಶ್ರಮದ ಸುತ್ತ 55 ಎಕರೆ ಭೂಮಿಯನ್ನು ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಇದರಿಂದ ಆಶ್ರಮಕ್ಕೆ ದಕ್ಕೆಯಾಗುವುದರ ಜೊತೆಗೆ ತನ್ನ ಮೂಲ ಸಂಸ್ಕೃತಿಯನ್ನು ಕಳೆದುಕೊಳ್ಳಲಿದೆ ಹೀಗಾಗಿ ಕಾಮಗಾರಿಗೆ ತಡೆ ನೀಡಬೇಕೆಂದು ತುಷಾರ್ ಗಾಂಧಿ ಮನವಿ ಮಾಡಿದ್ದರು.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆ ನಡೆಸಿ, ಈ ಯೋಜನೆಯು ಮಹಾತ್ಮಾ ಗಾಂಧಿಯವರ ಆಲೋಚನೆಗಳು ಮತ್ತು ತತ್ವಶಾಸ್ತ್ರವನ್ನು ಉತ್ತೇಜಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ ಈ ಆಶ್ರಮವು ಎಲ್ಲಾ ವಯೋಮಾನದ ಮನುಕುಲಕ್ಕೆ ಕಲಿಕೆಯ ಸ್ಥಳವಾಗಿದೆ ಎಂದು ಪೀಠ ಹೇಳಿದೆ.
ವಿವಾರಣೆ ವೇಳೆ ಗಾಂಧಿ ಆಶ್ರಮಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಆಶ್ರಮದ ಮೂಲ ಸ್ವರೂಪ ಬದಲಾವಣೆ ಮಾಡುವುದಿಲ್ಲ. ಆಶ್ರಮದ ಸುತ್ತಮುತ್ತಲಿನ 55 ಎಕರೆ ಭೂಮಿಯನ್ನು ಮಾತ್ರ ಮರು ಅಭಿವೃದ್ಧಿಪಡಿಸುತ್ತದೆ ಎಂದು ಅಡ್ವೊಕೇಟ್ ಜನರಲ್ ಕಮಲ್ ತ್ರಿವೇದಿ ಸಲ್ಲಿಸಿದ ಸಲ್ಲಿಕೆಯನ್ನು ಕೋರ್ಟ್ ಪರಿಗಣಿಸಿದೆ.
ಈ ಅರ್ಜಿಯನ್ನು ಮೊದಲು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠವು ವಿವರವಾದ ವಿಚಾರಣೆಯ ನಂತರ ತೆಗೆದುಕೊಳ್ಳಬೇಕಾದ ಹೊಸ ನಿರ್ಧಾರಕ್ಕಾಗಿ ವಿಷಯವನ್ನು ಪಟ್ಟಿ ಮಾಡಲು ಹೈಕೋರ್ಟ್‌ಗೆ ವರ್ಗಾಯಿಸಿತ್ತು.